Monday, February 11, 2013

Is Corporal Punishment Required - Discussion in Prajavani Shikshana 11 Feb 2013


Is Corporal Punishment Required - Discussion in Prajavani Shikshana 11 Feb 2013

ಪ್ರಜಾವಾಣಿ

ತರಬೇತಿಯಲ್ಲಿ ಶಿಕ್ಷೆಯ ವೈಭವೀಕರಣ?
ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್ ಅಳವಡಿಕೆಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಿಂದ ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ಶಿಕ್ಷಕರಿಗೆ ಬ್ರಿಟಿಷ್ ಕೌನ್ಸಿಲ್ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ. ಈ ತರಬೇತಿ `ಮಾಸ್ಟರ್ ಟ್ರೈನರ್ ಡೆವಲಪ್‌ಮೆಂಟ್ ಪ್ರೋಗ್ರ್ಯಾಂ'(ಫೇಸ್ - 2) ಎಂಬ ಹೆಸರಿನಲ್ಲಿ ನಡೆಯುತ್ತದೆ.
ತರಬೇತಿಯ 5ನೇ ದಿನದ ಪಠ್ಯಕ್ರಮದಲ್ಲಿ `ಬಹುಮಾನ ಮತ್ತು ಶಿಕ್ಷೆ' ಎಂಬ ವಿಷಯದ ಬಗ್ಗೆ ಚರ್ಚೆ ನಡೆಯುತ್ತದೆ. ಆಗ ತರಬೇತಿನಿರತ ಶಿಕ್ಷಕರು ಮಕ್ಕಳಿಗೆ ನೀಡಬೇಕಾದ `ಬಹುಮಾನ ಮತ್ತು ಶಿಕ್ಷೆ'ಗೆ ಸಂಬಂಧಿಸಿದ 25 ಅಂಶಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳ ಬೇಕಾಗುತ್ತದೆ. ಈ ಸಂದರ್ಭವನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ತರಬೇತುದಾರರಿಗೆ ಮಾಸ್ಟರ್ ಕೈಪಿಡಿಯೊಂದನ್ನು ನೀಡಲಾಗಿದೆ. ಅದರ ಪುಟ ಸಂಖ್ಯೆ 90ರಲ್ಲಿ 11 ಶಿಕ್ಷೆಗಳನ್ನು ಒಳಗೊಂಡ ಪಟ್ಟಿ ಇದ್ದು, ಅದರ ವಿವರ ಇಲ್ಲಿದೆ:
Punishments
*Hitting a child with a ruler
*Making a child stand in the corner
*Telling a child she/ he is an idiot
*Throwing a board rubber at a child
*Telling a child to go and see the head teacher
*Extra homework
*Phoning a child’s parents
*Writing a leltter to a child’s parents
*Asking a child to leave the classroom
*Telling other students not to play with a naughty child
*Making a child write lines
ಇಂಗ್ಲಿಷ್‌ನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ನೀಡಲಾಗುತ್ತಿರುವ ಈ ತರಬೇತಿಯಲ್ಲಿ ತರಬೇತುದಾರರೆಂಬ ಗರಡಿಯಾಳುಗಳು ಕೋಲಿನ ತುದಿಯಲ್ಲಿ ಉಣಿಸುತ್ತಿರುವ ಗರಡೀಫಲವನ್ನು ಶಿಕ್ಷಕರು ಅಷ್ಟೇ ಶ್ರದ್ಧಾ ಭಕ್ತಿಯಿಂದ ತಮ್ಮ ತಮ್ಮ ತರಗತಿಗಳಲ್ಲಿ ಬಾಸುಂಡೆ ಪ್ರಸಾದದ ರೂಪದಲ್ಲಿ ಮಕ್ಕಳಿಗೆ ಹಂಚುತ್ತಿದ್ದಾರೆ. ಇದು ಅವರು ಪಡೆಯುತ್ತಿರುವ ತರಬೇತಿಯ ಯಶಸ್ಸಲ್ಲದೇ ಮತ್ತೇನು? 
ತರಬೇತಿಗೆ ಸಂಬಂಧಿಸಿದ ದಾಖಲೆಗಳಲ್ಲಿ `ವಿಷಯವನ್ನು ಚರ್ಚೆಗೆ ಬಿಡಲಾಗಿದೆ' ಎಂದು ಹೇಳಿದ್ದರೂ, ಶಿಕ್ಷೆಗಳನ್ನು ಇಷ್ಟು ನಿಕೃಷ್ಟವಾಗಿ ಕೈಪಿಡಿಯಲ್ಲಿ ಪ್ರಸ್ತಾಪಿಸುವುದು ಎಷ್ಟು ಸೂಕ್ತ? ಸಾಮಾಜಿಕ- ಆರ್ಥಿಕ- ಸಾಂಸ್ಕೃತಿಕ- ಮಾನಸಿಕ- ಸ್ಥಳೀಯ ಭಾಷಾ ಒತ್ತಡಗಳಲ್ಲಿ ಇಂಗ್ಲಿಷ್ ಕಲಿಯಲು ತಿಣುಕಾಡುತ್ತಿರುವ ಕನ್ನಡದ ಕಂದಮ್ಮಗಳನ್ನು ನಿರ್ದಾಕ್ಷಿಣ್ಯವಾಗಿ ದಂಡಿಸುವುದು, ಇಂಗ್ಲಿಷ್‌ನಲ್ಲೇ ಮಾತನಾಡುವಂತೆ ಒತ್ತಡ ಹೇರುವುದು ಎಷ್ಟು ಸರಿ?
ಯಾವುದೇ ವಿದೇಶಿ ಭಾಷೆಯನ್ನು ಮಾತೃಭಾಷೆಯ ಮೂಲಕ ಅರ್ಥ ಮಾಡಿಕೊಂಡು ಒಂದು ಹಂತದ ನಂತರ ಯಶಸ್ವಿಯಾಗಿ ಬಳಸಲು ಸಾಧ್ಯ. ಆದರೆ  ಅರ್ಥವನ್ನೇ ಮಾಡಿಕೊಳ್ಳದೆ ಇಂಗ್ಲೆಂಡಿನ ಮೂಸೆಯಿಂದಲೇ ಎರಕ ಹೊಯ್ದು ಕನ್ನಡದ ಇಂಗ್ಲಿಷ್ ಬೊಂಬೆಗಳನ್ನು ಸಿದ್ಧ ಮಾಡಲು ಸಾಧ್ಯವೇ?
ಅರ್ಥಹೀನ ತರಬೇತಿಗಳಲ್ಲೇ ಕಾಲ ಕಳೆಯದೆ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡವನ್ನಾದರೂ ಸರಿಯಾಗಿ ಧ್ವನಿ ವಿಜ್ಞಾನ ಆಧಾರಿತ ಅಕ್ಷರ ಮಾಲೆಯ ಆಧಾರದಲ್ಲಿ ಕಲಿಸಲಾಗುತ್ತಿದೆಯೇ ಎಂದರೆ, ಅದನ್ನೂ ಧ್ವಂಸಗೊಳಿಸಿ ರ ಗ ಸ ದ ಅ  ಎಂಬ ಅಕ್ಷರ ವಿಧಾನದ ಮೂಲಕ ಹೇಳಿಕೊಡುವ ಪ್ರಯತ್ನ ಹತ್ತು ವರ್ಷಗಳಿಂದಲೂ ನಡೆಯುತ್ತಲೇ ಬಂದಿದೆ. ಇದೀಗ ವಿದ್ಯಾರ್ಥಿಗಳಿಗೆ ಅಕ್ಷರ ಮಾಲೆ ಎಂದರೆ ಏನು ಎನ್ನುವುದೇ ಮರೆತಂತಾಗಿದೆ. ಮುಂದಿನ ವರ್ಷದಿಂದ ಇಂಗ್ಲಿಷ್ ಅಕ್ಷರಮಾಲೆಯನ್ನು ಕತ್ತರಿಸಿ, ಏಳು ಭಾಗಗಳನ್ನಾಗಿ ಮಾಡಿರುವ ಕಾರ್ಡುಗಳ ಪದ್ಧತಿಯೊಂದನ್ನು ಜಾರಿಗೆ ತರುವ ಸಿದ್ಧತೆ ನಡೆದಿದೆಯಂತೆ!
ಇಂತಹ ಕಲಿಕಾ ನ್ಯೂನತೆಗಳು ಒತ್ತಟ್ಟಿಗಿರಲಿ; ಮಕ್ಕಳಿಗೆ ಅಳತೆ ಪಟ್ಟಿಯಿಂದ ಹೊಡೆಯುವುದು, ಈಡಿಯಟ್ ಎಂದು ಕರೆಯುವುದು, ಡಸ್ಟರ್‌ನಿಂದ ಹೊಡೆಯುವುದು, ಮೂಲೆಯಲ್ಲಿ ನಿಲ್ಲಿಸುವುದು, ತರಗತಿ ಕೋಣೆಯಿಂದ ಹೊರ ಕಳುಹಿಸುವುದು... ಇತ್ಯಾದಿ ಶಿಕ್ಷೆಗಳು ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಮೂಲ ಉದ್ದೇಶವೇ? ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳನ್ನು ಶಾಲಾ ವಾತಾವರಣಕ್ಕೆ ತರುವ ಕೆಲಸ ಶ್ರಮದಾಯಕ ಆಗಿರುವುದು ಇಂತಹ ಶಿಕ್ಷೆಗೆ ಹೆದರಿಯೇ ಅಲ್ಲವೇ? 
ತರಬೇತುದಾರರೇ, ಅಧಿಕಾರಿಗಳೇ ಕಳೆದ ನಾಲ್ಕಾರು ವರ್ಷಗಳಿಂದ ನಡೆಯುತ್ತಿರುವ ಈ ಶಿಕ್ಷೆಯ ವ್ಯವಸ್ಥಿತ ಹಂಚುವಿಕೆ ನಿಮ್ಮ ಗಮನಕ್ಕೆ ಬಂದಿಲ್ಲವೇ?

No comments: