ಇಂಗ್ಲಿಷ್ ಭಾಷೆ ಮಾತನಾಡಲು ಮತ್ತು ಬರೆಯುವುದನ್ನು ಕಲಿಯಲು ಖಾಸಗಿ ತರಗತಿಗಳಿಗೇ ಸೇರಬೇಕೆಂದೇನೂ ಇಲ್ಲ. ಮನಸ್ಸು ಮಾಡಿದರೆ, ನಾವು ದಿನನಿತ್ಯ ಬಳಸುವ ಮೊಬೈಲ್, ಟಿ.ವಿ., ಇಂಟರ್‌ನೆಟ್‌ಗಳ ಮೂಲಕವೇ ಸ್ವಂತ ‘ಲ್ಯಾಂಗ್ವೇಜ್ ಲ್ಯಾಬ್’ ರಚಿಸಿಕೊಂಡು ಭಾಷೆಯನ್ನು ಸಿದ್ಧಿಸಿಕೊಳ್ಳಬಹುದು.
ಸಾವಿರಾರು ರೂಪಾಯಿ ಶುಲ್ಕ ಕೊಟ್ಟು ‘ಸ್ಪೋಕನ್ ಇಂಗ್ಲಿಷ್’ ತರಗತಿಗಳಿಗೆ ಸೇರಿ, ಇಂಗ್ಲಿಷ್ ಕಾನ್‌ವರ್ಸೇಷನ್, ಸ್ಪೋಕನ್ ಇಂಗ್ಲಿಷ್, ಇಂಗ್ಲಿಷ್ ಸ್ಪೀಕಿಂಗ್, ಕಾನ್‌ವರ್ಸೇಷನಲ್ ಇಂಗ್ಲಿಷ್, ಸಾಫ್ಟ್‌ಸ್ಕಿಲ್ ಟ್ರೈನಿಂಗ್ ಎಂದೆಲ್ಲ ಉಠಾಬೈಸ್ ತೆಗೆಯುತ್ತಿರುವ ಕನ್ನಡದ ಇಂಗ್ಲಿಷ್ ಪ್ರೇಮಿಗಳಿಗೆ, ತಮ್ಮ ಬೆರಳ ತುದಿಯಲ್ಲೇ ಇಂಗ್ಲಿಷ್ ಕಲಿಕೆಯ ಸಾಧನಗಳಿವೆ ಎಂಬುದು ಅರಿವಿಗೇ ಬರುತ್ತಿಲ್ಲ!
ತಮ್ಮ ಕಿಸೆಯಲ್ಲೇ ಇರುವ ಮೊಬೈಲ್ ಫೋನ್, ಮನೆಯಲ್ಲಿರುವ ರೇಡಿಯೊ, ಟಿ.ವಿ., ಡಿ.ವಿ.ಡಿ., ಎಂಪಿತ್ರೀ ಪ್ಲೇಯರ್, ಕಂಪ್ಯೂಟರ್, ಇಂಟರ್ನೆಟ್ಗಳನ್ನೇ ಬಳಸಿ ಸ್ವಂತ ‘ಲ್ಯಾಂಗ್ವೇಜ್ ಲ್ಯಾಬ್’ ಮಾಡಿಕೊಂಡು, ಇಂಗ್ಲಿಷ್ ಕಲಿಯಲು ಅವರು ಯಾಕೆ ಮನಸ್ಸು ಮಾಡುತ್ತಿಲ್ಲವೋ ಆ ದೇವರೇ ಬಲ್ಲ.
ಹಲೊ ‘ಟಾಕಿಂಗ್ ಟಾಮ್’!
‘ಗುಡ್ ಈವ್ನಿಂಗ್ ಸರ್, ಏನ್ ಸರ್ ನೀವೂ ಮಕ್ಕಳ ತರಾ ಮೊಬೈಲ್‌ನಲ್ಲಿ ‘ಟಾಕಿಂಗ್ ಟಾಮ್’ ಜೊತೆ ಆಟ ಆಡ್ತಾ ಇದ್ದೀರಾ? ಒಂದ್ ಸಲ ನಮ್ ಕೈಗೆ ಅದನ್ನ ಕೊಡಿ, ಆ ಟಾಕಿಂಗ್ ಟಾಮ್ ಗತಿ ಏನಾಗುತ್ತೆ ಅಂತ ನೋಡ್ತೀರಂತೆ’ ಎಂದು ಸಮರ್ಥ ಹೇಳಿದ.
‘ಕೊಡಿ ಸರ್ ಪ್ಲೀಸ್! ನಾವೂ ಸ್ವಲ್ಪ ಹೊತ್ತು ಅದರ ಜೊತೆ ಆಡಿ ಕೊಡ್ತೀವಿ’ ಅಂತ ಅವನ ಸ್ನೇಹಿತರ ಗುಂಪು ಒಕ್ಕೊರಲಿನಿಂದ ಕೂಗಿತು. ‘ಓ.ಕೆ., ಓ.ಕೆ. ತಗೊಳ್ಳಿ ಕೊಡ್ತೇನೆ. ಅದರ ಜೊತೆ ಅದೇನೇನ್ ಮಾಡ್ತೀರೋ ಅದನ್ನ ನನಗೂ ತೋರಿಸಬೇಕು ಆಯ್ತಾ’ ಎಂದು ಹೇಳಿ ಪ್ರೊ. ಛಾಯಾಪತಿ ಅವರು ಸಮರ್ಥನ ಕೈಗೆ ತಮ್ಮ ಹೊಸ ಆಂಡ್ರಾಯ್ಡ ಫೋನ್ ಕೊಟ್ಟರು.
‘ಎಲ್ಲಿ, ಯಾರಾದ್ರೂ ಇದಕ್ಕೆ ಸ್ವಲ್ಪ ತಮಾಷೆಯಾಗಿ ಬೈಯಿರಿ ನೋಡೋಣ’ ಎಂದು ಹೇಳಿ ಪ್ರಜ್ವಲ್ ಮೊಬೈಲ್‌ನಲ್ಲಿದ್ದ ‘ಟಾಕಿಂಗ್ ಟಾಮ್’ನ್ನು ಆ್ಯಕ್ಟಿವೇಟ್ ಮಾಡಿದ. ‘ಯೂ ಈಡಿಯಟ್’ ಅಂತ ಶೋಭಿತ್ ಬೈಯ್ದ. ‘ಟಾಕಿಂಗ್ ಟಾಮ್’ ಸಹ ಕೂಡಲೇ ‘ಯೂ ಈಡಿಯಟ್’ ಎಂದು ತಿರುಗಿಸಿ ಬೈಯ್ದುಬಿಟ್ಟಿತು. ಸ್ನೇಹಿತರೆಲ್ಲ ಘೊಳ್ ಎಂದು ನಗತೊಡಗಿದರು. ‘ಹಲೊ, ಹೌ ಆರ್ ಯೂ’ ಎಂದು ಧ್ರುತಿ ಭಟ್ ಕೇಳಿದಳು. ‘ಟಾಕಿಂಗ್ ಟಾಮ್’ ಅವಳಿಗೂ ತಿರುಗಿ ಹಾಗೇ ಕೇಳಿತು. ‘ಹಾಯ್, ಹ್ಯಾಡ್ ಯುವರ್ ಮೀಲ್ಸ’ ಸಹನಾ ಪ್ರಶ್ನಿಸಿದಳು. ‘ಟಾಕಿಂಗ್ ಟಾಮ್’ ಸಹ ಅವಳಿಗೂ ಮರಳಿ ಅದೇ ಪ್ರಶ್ನೆ ಕೇಳಿತು.
ಹೀಗೆ ‘ಟಾಕಿಂಗ್ ಟಾಮ್’ ಜೊತೆಗಿನ ಮಕ್ಕಳ ಆಟ ಮುಂದುವರಿಯುತ್ತಲೇ ಇತ್ತು ಛಾಯಾಪತಿಯವರ ಅಧ್ಯಯನ ಕೋಣೆ- ಕಂ- ಮೊಬೈಲ್ ಲ್ಯಾಂಗ್ವೇಜ್ ಲ್ಯಾಬ್ನಲ್ಲಿ. ಮಕ್ಕಳಂತೆಯೇ ಹೀಗೆ ಕಲಿಯುವುದು ಎಷ್ಟು ಸುಲಭ, ಸರಳ, ಪರಿಣಾಮಕಾರಿ ಅಲ್ಲವೇ?
ಆ್ಯಪ್ಸ್ ಬಳಸಿ ಸುಲಭವಾಗಿ ಕಲಿಸಿ
ಇತ್ತೀಚೆಗೆ ಗೂಗಲ್ ಪ್ಲೇ ಸ್ಟೋರ್, ಸ್ಯಾಮ್ಸಂಗ್, ನೋಕಿಯಾ, ಮೈಕ್ರ್ೊಮ್ಯಾಕ್ಸ್, ಆ್ಯಪಲ್ ಇತ್ಯಾದಿ ಜಾಲತಾಣಗಳಲ್ಲಿ ಲಕ್ಷಾಂತರ ಆ್ಯಪ್ಸ್‌ಗಳು (ಅಪ್ಲಿಕೇಶನ್‌ಗಳು) ಲಭ್ಯವಿವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಉಪಯೋಗಕ್ಕಾಗಿ ಉಚಿತ ಡಿಕ್ಷ್‌ನರಿಗಳು, ಸ್ಪೋಕನ್ ಇಂಗ್ಲಿಷ್ ಮಾದರಿಗಳು, ಭಾರತೀಯ ಭಾಷೆಗಳ ಪದಕೋಶಗಳು, ವಿಶ್ವಕೋಶ, ಯೂ- ಟ್ಯೂಬ್, ವರ್ಚುಯಲ್ ಲ್ಯಾಬ್, ಗ್ಲೋಬ್, ಟ್ರಾನ್ಸ್‌ಲೇಶನ್ ಸೌಲಭ್ಯ, ಆಡಿಯೊ-– ವಿಡಿಯೊ ಚಿತ್ರಣ, ವೆಬ್ ಬ್ರೌಸಿಂಗ್‌ನಂತಹ ಸೌಲಭ್ಯಗಳು ಕಲಿಕೆಯನ್ನು ಆಸಕ್ತಿದಾಯಕ ಆಗಿಸಿವೆ.
‘ಸರ್, ಸರ್, ಲೆಟರ್ ರೈಟಿಂಗ್ ಹೇಳ್ಕೊಡಿ ಸರ್ ಪ್ಲೀಸ್. ಈ ತಿಂಗಳ ಟೆಸ್ಟ್‌ನಲ್ಲಿ ಲೆಟರ್ ರೈಟಿಂಗ್ ಕೊಡ್ತಾರಂತೆ’ ಎಂದು ಕೇಳಿದ ರಕ್ಷಿತ್.
‘ಅಲ್ಲಯ್ಯ, ನಿಮ್ ಟೀಚರ್ ಯಾವ ಜಮಾನಾದಲ್ಲಿದ್ದಾರೆ ಇನ್ನೂ. ಲೆಟರ್ ರೈಟಿಂಗ್ ಬರೀ ಪರೀಕ್ಷೆಗೆ ಮಾತ್ರ ಕೇಳೋ ಪ್ರಶ್ನೆ ಥರಾ ಮಾಡಿಬಿಟ್ಟಿದ್ದಾರೆ ಇವ್ರೆಲ್ಲ. ಇದು ಇ–- ಮೇಲ್, ಎಸ್.ಎಂ.ಎಸ್., ಟ್ವಿಟರ್ ಬಳಕೆಯಾಗ್ತಿರೋ ಕಾಲ. ಇದರಲ್ಲಿ ಅವರದ್ದೇನೂ ತಪ್ಪಿಲ್ಲ ಬಿಡು, ಸಿಲೆಬಸ್‌ನಲ್ಲಿ ಇದೆ ಅಂತ ಹೇಳಿಕೊಡ್ತಾರೆ’ ಎಂದು ಪ್ರೀತಿಯಿಂದಲೇ ಟೀಕಿಸಿದರು ಛಾಯಾಪತಿ.
ಪತ್ರ ಲೇಖನ, ಪ್ರಬಂಧ, ನಿಬಂಧಗಳೆಲ್ಲ ದೀರ್ಘ ಅಭ್ಯಾಸಗಳೆಂದು ಪರಿಗಣಿತವಾಗಿ, ಎಸ್.ಎಂ.ಎಸ್., ಚಾಟಿಂಗ್, ಇ-– ಮೇಲ್ ಭರಾಟೆ ಆರಂಭ ಆಗಿರುವುದರಿಂದ ಮೊಬೈಲ್, ಇಂಟರ್‌ನೆಟ್, ಫೇಸ್‌ಬುಕ್ ಮತ್ತು ಬ್ಲಾಗ್‌ಗಳ ಮೂಲಕ ತೋಚಿದ್ದನ್ನು ಗೀಚಿ (ಟೈಪ್ ಮಾಡಿ) ಕಲಿಯುವ ಅವಕಾಶ ಇದೆ.
ಬಹುತೇಕ ಮಕ್ಕಳು ಈಗ ಹೇಗೋ ಮಾಡಿ ಇ-– ಮೇಲ್ ಐ.ಡಿ. ಬಳಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ತಮ್ಮ ಅಕೌಂಟ್ ತೆರೆದು ಸ್ನೇಹಿತರೊಂದಿಗೆ ಸಂಭಾಷಣೆ, ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಬ್ಲಾಗ್ ಓಪನ್ ಮಾಡಿ ತಮಗೆ ಇಷ್ಟವಾದ ಮಾಹಿತಿ, ಫೋಟೊಗಳನ್ನು ಪ್ರಕಟಿಸುತ್ತಿದ್ದಾರೆ. ಜಗತ್ತಿನ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನೂ ನಿಲ್ಲಿಸುತ್ತಿದ್ದಾರೆ. ಇದಕ್ಕಿಂತ ಸುಲಭವಾದ, ಪ್ರಾಕ್ಟಿಕಲ್ ಆಗಿ ಕಲಿಯುವ ವಿಧಾನ ಬೇರೆ ಯಾವುದಿದೆ ಹೇಳಿ?
ಕಾಲಕ್ಕೆ ತಕ್ಕಂತೆ ಹಿರಿಯರಾದ ನಾವೂ ಬದಲಾಗಲೇ ಬೇಕು. ಕಂಪ್ಯೂಟರ್ ಗೊತ್ತಿಲ್ಲ, ಬ್ರೌಸಿಂಗ್ ಬರೋಲ್ಲ, ಸೌಲಭ್ಯ ಇಲ್ಲ ಎಂದು ಕೊರಗುತ್ತಾ ಕೂರದೆ ಹೊಸ ಸವಾಲನ್ನು ಎದುರಿಸಲು ಸಿದ್ಧರಾಗಲೇಬೇಕು.
ಕೌಶಲ ಕಲಿಸುವ ಸಾಧನ
ಭಾಷೆಯೊಂದನ್ನು ಕಲಿಯುವುದಕ್ಕೆ ಇರುವ ಕೌಶಲಗಳೆಂದರೆ ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು. ಕನ್ನಡ, ಸಂಸ್ಕೃತ, ಹಿಂದಿ ಅಥವಾ ಇಂಗ್ಲಿಷ್ ಭಾಷೆಯನ್ನು ಕಲಿಯಲು ನಮಗೆ ಈ ನಾಲ್ಕು ಕೌಶಲಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಮೊಬೈಲ್ ಸಂಭಾಷಣೆಯಲ್ಲಿ, ಟಿ.ವಿ./ ರೇಡಿಯೊ/ ಇಂಟರ್‌ನೆಟ್ ಕಾರ್ಯಕ್ರಮಗಳಲ್ಲಿ ಆಲಿಸುವ ಮತ್ತು ಮಾತನಾಡುವ ಕೌಶಲವನ್ನು ಕಲಿಯುವ ಅವಕಾಶ ಇದೆ. ಓದಲಿಕ್ಕೆ ಕಂಪ್ಯೂಟರ್ ಮತ್ತು ಪತ್ರಿಕೆಗಳಿವೆ. ಬರೆಯಲಿಕ್ಕೆ ಎಸ್.ಎಂ.ಎಸ್., ಇ- ಮೇಲ್, ಚಾಟಿಂಗ್ಗಳಿವೆ! ಇತ್ತೀಚಿನ ಆಂಡ್ರಾಯ್ಡ ಮೊಬೈಲ್‌ಗಳಲ್ಲಿ ನೂರಾರು ಆ್ಯಪ್‌ಗಳಿದ್ದು ಡಿಕ್ಷನರಿ, ಚಾಟಿಂಗ್, ಗ್ರಾಮರ್, ಇ– ಬುಕ್, ಪ್ಲೇ– ಬುಕ್‌ಗಳ ಮೂಲಕ ಇಂಗ್ಲಿಷ್ ಕಲಿಸುವ ಮಾಹಿತಿ ಭಂಡಾರವೇ ಅಡಗಿದೆ.
ಓದಿ, ಓದಿಸಿ, ಕಲಿಯಿರಿ
ಓದುವುದನ್ನು ಅಥವಾ ಮಾತನಾಡುವುದನ್ನು ಧ್ವನಿ ಮುದ್ರಿಸಿಕೊಳ್ಳಲು ಮೊಬೈಲ್ ಮತ್ತು ಕಂಪ್ಯೂಟರ್ಗಳಲ್ಲಿ ಸೌಲಭ್ಯಗಳಿವೆ. ಒಂದೇ ಒಂದು ನಿಮಿಷ ನೀವು ಓದುವುದನ್ನು ಧ್ವನಿ ಮುದ್ರಿಸಿಕೊಳ್ಳಿ. ಓದುವ ವಿಷಯ ನಿಮ್ಮ ತರಗತಿಗೆ ಸಂಬಂಧಿಸಿದ ಪಾಠ, ಇಲ್ಲವೇ ಯಾವುದೇ ದಿನಪತ್ರಿಕೆಯ ಆಯ್ದ ಭಾಗವಾದರೂ ಆಗಿರಬಹುದು. ಇಂಗ್ಲಿಷ್ ಸಂಭಾಷಣಾ ಪ್ರಾಯೋಗಿಕ ಪಾಠಗಳೂ ಈ ಸಂದರ್ಭದಲ್ಲಿ ಉಪಯುಕ್ತವೇ.
ನಿಧಾನ ಗತಿಯ ಓದುಗರಾದರೆ ಸುಮಾರು 60-– 100 ಪದಗಳನ್ನು ಮಾತ್ರ ಓದಿರುತ್ತೀರಿ. ಮಧ್ಯಮ ಗತಿಯವರಾದರೆ 100-– 140 ಪದಗಳು. ವೇಗವಾಗಿ ಓದುವವರಾದರೆ 140-– 200 ಪದಗಳು. ಇದು ನಿಮ್ಮ ಓದಿನ ಗತಿ! ಇದನ್ನು ಟಿ.ವಿ. ಅಥವಾ ರೇಡಿಯೊ ನ್ಯೂಸ್ ರೀಡರ್‌ಗಳ ಓದಿನ ವೇಗದೊಂದಿಗೆ ಹೋಲಿಸಿ ನೋಡಿಕೊಂಡರೆ ತಿಳಿಯುತ್ತದೆ. ವಿದೇಶಿ ವಾರ್ತಾ ವಾಚಕರು 240-– 300 ಪದಗಳ ವೇಗದಲ್ಲಿ ಓದುವುದರಿಂದ ನಮಗೆ ಅವರ ಇಂಗ್ಲಿಷ್‌ನ್ನು ಅಷ್ಟು ಬೇಗ ಅನುಸರಿಸಲು ಸ್ವಲ್ಪ ಕಷ್ಟವಾಗುತ್ತದೆ.
ಇಂಟರ್‌ನೆಟ್‌ನಲ್ಲಿ ಸಾವಿರಾರು ಮಾದರಿ ಪಾಠಗಳು ಲಭ್ಯವಿವೆ. ನೀವು ಧ್ವನಿ ಮುದ್ರಿಸಿಕೊಂಡಿರುವುದನ್ನು ಮತ್ತೆ ಮತ್ತೆ ಕೇಳಿದಾಗ ಎಲ್ಲಿ ತಪ್ಪಿದ್ದೀರಿ, ಯಾವ ಪದವನ್ನು ಸರಿಯಾಗಿ ಉಚ್ಚರಿಸಬೇಕಿತ್ತು, ಎಲ್ಲೆಲ್ಲಿ ಒತ್ತು ನೀಡಬೇಕಿತ್ತು, ಧ್ವನಿಯ ಏರಿಳಿತ ಹೇಗಿರಬೇಕಿತ್ತು ಎಂಬುದು ತಿಳಿಯುತ್ತದೆ. ಮಕ್ಕಳಿಗೆ ಅವರ ತರಗತಿಯ ಪಾಠಗಳನ್ನು ಓದಿ, ಧ್ವನಿ ಮುದ್ರಿಸಿಕೊಂಡು, ಮತ್ತೆ ಮತ್ತೆ ಕೇಳಲು ಹೇಳುವುದರಿಂದ ಓದುವ, ಮಾತನಾಡುವ, ಆಲಿಸುವ ಕೌಶಲ ಕರಗತವಾಗುತ್ತದೆ.
(ಇಂಗ್ಲಿಷ್ ಕಲಿಕೆಗೆ ಪೂರಕವಾಗಿ One Minute English, Applied English Course -– A Handbook of Spoken and Written English, Play and Learn English through Language Games, Blog Blog Blog ಪುಸ್ತಕಗಳನ್ನು ಗಮನಿಸಬಹುದು. ಫೋನ್: 080-22203580 / 30578020).
Easy English through Mobile Phones and Apps - Article in Prajavani Daily - Shikshana Supplement - 18 Nov 2013