Monday, December 27, 2010

School Automation - Shala Tantra Software - Article in Prajavani - Shikshana - 27 Dec 2010

ಪ್ರಜಾವಾಣಿ » ಶಿಕ್ಷಣ ಪುರವಣಿ

http://prajavani.net/Content/Dec272010/dheducation20101226219590.asp

ಶಾಲೆಗಳಲ್ಲಿ ಇ-ಆಡಳಿತಕ್ಕೆ ಸೂತ್ರ

ಬೇದ್ರೆ ಮಂಜುನಾಥಪ್ರತಿಯೊಂದು ಶಾಲೆಯ ದಾಖಲೀಕರಣಕ್ಕೆ ತಕ್ಕಂತಹ ತಂತ್ರಾಂಶದ ಕೊರತೆ ನೀಗಿಸಲೆಂದೇ ಇದೀಗ ಬಂದಿದೆ ಫ್ರೀಗಣಿತ.ಕಾಂ ರೂಪಿಸಿರುವ ಶಾಲಾತಂತ್ರ - ಶಾಲಾ ಆಡಳಿತ ತಂತ್ರಾಂಶ.ಶಾಲೆಗಳಲ್ಲಿ ದಾಖಲೆಗಳನ್ನು ಸಿದ್ಧಪಡಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಸೈ ಅನ್ನಿಸಿಕೊಳ್ಳುವುದು ಪ್ರಯಾಸದ ಕೆಲಸ.  ಪಾಠಬೋಧನೆಯ ಜೊತೆಗೆ ಬಿಸಿ ಊಟದ ಲೆಕ್ಕವನ್ನೂ ನಿರ್ವಹಿಸುವುದರಲ್ಲಿಯೇ ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು ಸುಸ್ತಾಗುತ್ತಿದ್ದಾರೆ.

ಇವೆಲ್ಲವನ್ನೂ ಸರಳೀಕರಣಗೊಳಿಸಲು ಕಂಪ್ಯೂಟರ್ ಮೊರೆ ಹೋಗುವುದೇ ಉತ್ತಮ ಮಾರ್ಗ. ಆದರೆ ಪ್ರತಿಯೊಂದು ಶಾಲೆಯ ದಾಖಲೀಕರಣಕ್ಕೆ ತಕ್ಕಂತಹ ತಂತ್ರಾಂಶದ ಕೊರತೆ ನೀಗಿಸಲೆಂದೇ ಇದೀಗ ಬಂದಿದೆ ಫ್ರೀಗಣಿತ.ಕಾಂ ರೂಪಿಸಿರುವ ಶಾಲಾತಂತ್ರ - ಶಾಲಾ ಆಡಳಿತ ತಂತ್ರಾಂಶ. 

ಶಾಲಾತಂತ್ರ ತಂತ್ರಾಂಶವನ್ನು ಯಾವುದೇ ಕಂಪ್ಯೂಟರ್‌ನಲ್ಲಿ ಸುಲಭವಾಗಿ ಸ್ಥಾಪಿಸಬಹುದು. ಉಚಿತ ನಿರ್ವಹಣಾ ತಂತ್ರಾಂಶಗಳ ಸಹಾಯದಿಂದ ರೂಪಿತವಾಗಿರುವ ಶಾಲಾತಂತ್ರವನ್ನು ಉಪಯೋಗಿಸುವ ಮೊದಲು ಅದರ ಜೊತೆಗೆ ನೀಡಿರುವ ಪೂರಕ ತಂತ್ರಾಂಶಗಳನ್ನು ಅನುಸ್ಥಾಪಿಸಬೇಕು.  ಶಾಲಾತಂತ್ರ ಸ್ಥಾಪಿತವಾದ ನಂತರ ಅದನ್ನು ಆರಂಭಿಸಲು ನಿಗದಿಗೊಳಿಸಿರುವ ಚಿಹ್ನೆ (ಐಕನ್) ಒತ್ತಿದರೆ ಪರದೆಯ ಮೇಲೆ ಮೂಡಿ ಈ ತಂತ್ರಾಂಶ ಬಳಕೆಗೆ ಸಿದ್ಧವಾಗುತ್ತದೆ. ಮೊದಲ ಪುಟ(ಹೋಂ ಪೇಜ್)ದಲ್ಲಿ ಪ್ರವೇಶ - ಸಹಾಯ - ಸಂಪರ್ಕಿಸಿ ಎಂಬ ಸಂಪರ್ಕ ಕೊಂಡಿಗಳು ಮತ್ತು ಸ್ಥಿರ ಮಾಹಿತಿ - ಸಂಸ್ಕರಣೆ -  ವರದಿಗಳು - ನಿರ್ವಹಣೆ ಎಂಬ ನಾಲ್ಕು ಶೀರ್ಷಿಕೆಗಳು ಮೂಡುತ್ತವೆ.
 ಪ್ರತಿಯೊಂದು ಶೀರ್ಷಿಕೆಯೂ ಅಂತರ್‌ಸಂಪರ್ಕ ಕೊಂಡಿಗಳಿಂದ ಕೂಡಿದ್ದು ಸರಳವಾಗಿ ದಾಖಲೆಗಳನ್ನು ನಿರ್ವಹಿಸಲು ಸಹಕಾರಿಯಾಗಿದೆ.ಪ್ರವೇಶ ಕೊಂಡಿಯನ್ನು ಕ್ಲಿಕ್ಕಿಸಿ ಈ ತಂತ್ರಾಂಶ ಬಳಸುವವರ ಅಧಿಕೃತ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ನಮೂದಿಸಬೇಕು.

ಆ ನಂತರವಷ್ಟೇ ತಂತ್ರಾಂಶ ಬಳಕೆಗೆ ಅನುವು ಮಾಡಿ ಕೊಡುತ್ತದೆ. ಸಹಾಯ ಕೊಂಡಿಯನ್ನು ಕ್ಲಿಕ್ಕಿಸಿದಾಗ ಅಲ್ಲಿ ಈ ಶಾಲಾತಂತ್ರಾಂಶ ಬಳಕೆಯ ಕೈಪಿಡಿ ಲಭ್ಯವಾಗುತ್ತದೆ. ತಂತ್ರಾಂಶದ ಸಮಗ್ರ ಪರಿಚಯದ ಜೊತೆಗೆ ಇದನ್ನು ಯಾರು, ಹೇಗೆ, ಯಾವಾಗ, ಎಲ್ಲಿ, ಎಷ್ಟು ಬಾರಿ ನಿರ್ವಹಿಸಬಹುದು, ಏತಕ್ಕಾಗಿ ಮಾಹಿತಿ ಊಡಿಸಬೇಕು, ಅದರ ಉದ್ದೇಶ ಮತ್ತು ಅನುಕೂಲಗಳೇನು ಇತ್ಯಾದಿ ವಿವರಗಳೊಂದಿಗೆ ತಂತ್ರಾಂಶದಲ್ಲಿ ಬಳಸಿರುವ ವಿವಿಧ ಪಾರಿಭಾಷಿಕಗಳ ವಿವರಣೆಯೂ ಇದೆ.

ಹಾಗೆಯೇ ವಿವಿಧ ದಾಖಲೆಗಳ ಅಂಕಿ ಅಂಶಗಳನ್ನು ಊಡಿಸುವಾಗ ಯಾವ ಯಾವ ಸ್ಕ್ರೀನ್‌ಗಳನ್ನು ಆಯ್ದುಕೊಳ್ಳಬೇಕು, ಅದರ ಅನುಕೂಲ, ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳು, ಈ ತಂತ್ರಾಂಶವನ್ನು ಕಲಿಯುವ ಕ್ರಮ ಮತ್ತು ಕನ್ನಡದಲ್ಲಿಯೇ ದಾಖಲೆ ನಿರ್ವಹಿಸಬೇಕಿರುವುದರಿಂದ ಕನ್ನಡದಲ್ಲಿ ಟೈಪ್ ಮಾಡುವ ಕ್ರಮದ ವಿವರಣೆಯೂ ಇಲ್ಲಿ ಲಭ್ಯ.  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಸೂಕ್ತ ಜಾಲತಾಣ, ಫೋನ್‌ಸಂಖ್ಯೆ ಮತ್ತು ಅಂಚೆ ವಿಳಾಸವನ್ನು ನೀಡಲಾಗಿದೆ.

ಹೊಸದಾಗಿ ದಾಖಲೆಗಳನ್ನು ಫೀಡ್ ಮಾಡುವುದು ಮತ್ತು ಈಗಾಗಲೇ ಫೀಡ್ ಆಗಿರುವ ದಾಖಲೆಗಳಿಗೆ ಅಗತ್ಯ ತಿದ್ದುಪಡಿ ಮಾಡುವುದು, ದೈನಂದಿನ ಹಾಗೂ ಮಾಸಿಕ ವರದಿಗಳನ್ನು ತಯಾರಿಸಲು ಅನುಕೂಲವಾಗುವಂತೆ, ಆ ವರದಿಯನ್ನು ಪ್ರಿಂಟ್‌ಮಾಡಿ  ಸಂಬಂಧಪಟ್ಟ ಕಡತದಲ್ಲಿ ಸೇರಿಸಲು, ಕಳಿಸಿಕೊಡಲು ಸೌಲಭ್ಯ ಕಲ್ಪಿಸಿಕೊಡಲಾಗಿದೆ.  ಅದಕ್ಕಾಗಿಯೇ ನಾಲ್ಕು ಸ್ಕ್ರೀನ್‌ಗಳನ್ನು ಬಳಸಲಾಗಿದೆ.

ಸ್ಥಿರ ಮಾಹಿತಿ ಸ್ಕ್ರೀನ್‌ನಲ್ಲಿ ಪ್ರವರ್ಗಗಳು, ಭಾಷೆಗಳು, ಧರ್ಮಗಳು, ಶಾಲೆ, ಅಧ್ಯಾಪಕರು, ವಿದ್ಯಾರ್ಥಿಗಳು, ಪಠ್ಯವಿಷಯ ಮತ್ತು ಗರಿಷ್ಠ ಅಂಕಗಳು, ಬಿಸಿ ಊಟದ ಪ್ರಮಾಣ, ಅಕೌಂಟ್ ಮಾಸ್ಟರ್ ಎಂಬ ವಿಭಾಗಗಳಿವೆ. ಸ್ಕರಣೆ ಸ್ಕ್ರೀನ್‌ನಲ್ಲಿ ದೈನಿಕ ಹಾಜರಾತಿ, ಬಿಸಿ ಊಟದ ಪದಾರ್ಥಗಳ ಸ್ವೀಕೃತಿ, ಹಾಜರಾತಿ ದೃಢೀಕರಣ / ಊಟದ ಲೆಕ್ಕ, ಪರೀಕ್ಷೆಯಲ್ಲಿನ ಅಂಕಗಳ ನಮೂದನೆ, ಮಾಸಿಕ ಮುಕ್ತಾಯ (ಬಿಸಿ ಊಟ), ಆರಂಭಿಕ ಶಿಲ್ಕು (ಅಕೌಂಟ್ಸ್), ಸ್ವೀಕೃತಿ/ಆದಾಯ, ವ್ಯಯ, ವಾರ್ಷಿಕ ಮುಕ್ತಾಯ (ಅಕೌಂಟ್ಸ್) ಎಂಬ ವಿಭಾಗಗಳಲ್ಲಿ ಮಾಹಿತಿ ನಮೂದಿಸಬೇಕು.

ವರದಿಗಳು ಸ್ಕ್ರೀನ್‌ನಲ್ಲಿರುವ ಶಿಕ್ಷಕರ ಪಟ್ಟಿ, ವಿದ್ಯಾರ್ಥಿ ಪಟ್ಟಿ, ಹಾಜರಾತಿ ಪಟ್ಟಿ, ಅಂಕಪಟ್ಟಿ, ಮಾಸಿಕ ಹಾಜರಾತಿ (ಧರ್ಮ), ಮಾಸಿಕ ಹಾಜರಾತಿ (ಪ್ರವರ್ಗ), ಮಾಸಿಕ ಬಿಸಿ ಊಟ, ಆಯವ್ಯಯ ಪಟ್ಟಿ (ಅಕೌಂಟ್ಸ್) ನಿರ್ವಹಣೆಗೆ ಸಹಕಾರಿ.

ನಿರ್ವಹಣೆ ಸ್ಕ್ರೀನ್‌ನಲ್ಲಿ ಪಾಸ್‌ವರ್ಡ್ ಬದಲಾವಣೆ, ಬ್ಯಾಕ್‌ಅಪ್ (ಎಕ್ಸ್‌ಪೋರ್ಟ್), ರಿಸ್ಟೋರ್ (ಇಂಪೋರ್ಟ್), ಹಳೆಯ ದಾಖಲೆಗಳನ್ನು ಅಳಿಸು, ಎಲ್ಲವನ್ನು ಅಳಿಸು ಎಂಬ ಕೊಂಡಿಗಳಿದ್ದು ಅಗತ್ಯವಾದದ್ದನ್ನು ಉಳಿಸಿಕೊಂಡು, ಅನಗತ್ಯವಾದದ್ದನ್ನು ಅಳಿಸಿಬಿಡಲು ನೆರವಾಗುತ್ತವೆ.

ಶಾಲಾತಂತ್ರ ಇನ್ನೂ ಬೆಳವಣಿಗೆಯ ಹಂತದಲ್ಲಿದ್ದು ಪ್ರಥಮ ಹಂತದಲ್ಲಿಯೇ ಶಾಲೆಗಳಲ್ಲಿ ದಾಖಲೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅನುವಾಗುವಂತೆ ಈ ತಂತ್ರಾಂಶ ಕನ್ನಡದಲ್ಲಿಯೇ ರೂಪಿತವಾಗಿರುವುದು ಒಂದು ವಿಶೇಷ.

ಸರ್ವ ಶಿಕ್ಷಣ ಅಭಿಯಾನ ರೂಪಿಸಿರುವ ಡೈಸ್ ಮಾಹಿತಿಯ ಆಧಾರದಲ್ಲಿ ದಾಖಲಾತಿ ಅಂಶಗಳ ವರ್ಗೀಕರಣ ಮತ್ತು ಶಾಲಾ ಅಂಕಪಟ್ಟಿಯಲ್ಲಿರುವ ಪಾರ್ಟ್-ಎ ಮತ್ತು ಪಾರ್ಟ್-ಬಿ ಗ್ರೇಡ್ ನಮೂದಿಸುವಿಕೆಯು ನವೀಕೃತ ಮಾದರಿಯ ಅಳವಡಿಕೆ ಆಗಬೇಕಾದ ಅಗತ್ಯವಿದೆ.

ಹಾಗೆಯೇ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಅನುಕೂಲವಾಗುವಂತೆ ಇಂಗ್ಲಿಷ್ ಆವೃತ್ತಿಯನ್ನು ಸಿದ್ಧಪಡಿಸಬೇಕಾಗಿದೆ.  ಶಾಲಾತಂತ್ರ - ಶಾಲಾ ಆಡಳಿತ ತಂತ್ರಾಂಶವನ್ನು ಫ್ರೀಗಣಿತ.ಕಾಂ  ಅಥವಾ ಇಶಾಲೆ.ಆರ್ಗ್ (www.freeganita.com
 ಅಥವಾ www.eshale.org) ಜಾಲತಾಣಗಳಿಂದ ಪಡೆಯಬಹುದು ಅಥವಾ ಶಾಲಾತಂತ್ರ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆಂದೇ ರೂಪಿತವಾಗಿರುವ ಚಿತ್ರೀಕೃತ ಗಣಿತ ಪಾಠಶಾಲೆಯ ಸಿ.ಡಿ. ರೂಪದಲ್ಲಿಯೂ ಪಡೆಯಬಹುದು. 

ಸಿ.ಡಿ. ರೂಪದಲ್ಲಿ ಲಭ್ಯವಿರುವ ಶಾಲಾತಂತ್ರ - ಶಾಲಾ ಆಡಳಿತ ತಂತ್ರಾಂಶ ದ ಜೊತೆಗೆ 8, 9, 10ನೇ ತರಗತಿಗಳ ಚಿತ್ರೀಕೃತ ಗಣಿತ ಪಾಠಶಾಲೆ ಮಾಹಿತಿಯೂ ಲಗತ್ತಾಗಿದೆ.

ಪ್ರೌಢಶಾಲಾ ವಿದ್ಯಾರ್ಥಿಗಳ ಮೂರು ವರ್ಷದ ರಾಜ್ಯ ಹಾಗೂ ಕೇಂದ್ರೀಯ ಶಾಲೆಗಳ ಗಣಿತ ಪಠ್ಯಕ್ರಮದ ಅನುಸಾರ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ವಿಸ್ತೃತ ಮಾಹಿತಿ ಮತ್ತು ಅಭ್ಯಾಸಗಳನ್ನೊಳಗೊಂಡ, ಗಣಿತಕ್ಕಾಗಿಯೇ ಮೀಸಲಾದ ಉಚಿತ ಗಣಿತ www.freeganita.com
 ಜಾಲತಾಣವನ್ನು  ಕೆ. ವಿ. ರಾಜಶೇಖರ ಸೋಮಯಾಜಿಯವರು ಕಳೆದವರ್ಷ ರೂಪಿಸಿದ್ದರು. 

ಪಿ. ವಿಶ್ವೇಶ್ವರ ಹಂದೆಯವರು ಅದರ ಕನ್ನಡ ಅವತರಣಿಕೆ ಮಾಡಿದ್ದರು.  ನಂತರ ಕನ್ನಡದಲ್ಲಿರುವ ಆ ಎಲ್ಲಾ ಪಾಠಗಳನ್ನು 8, 9, 10ನೇ ತರಗತಿಗಳ ಚಿತ್ರೀಕೃತ ಗಣಿತ ಪಾಠಶಾಲೆ ಎಂಬ ಮೂರು ಡಿ.ವಿ.ಡಿ.ಗಳಲ್ಲಿ ಹಿಡಿದಿಟ್ಟು ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಮಾಡಿದ್ದರು.  ಆ ಮೂರೂ ಡಿ.ವಿ.ಡಿ.ಗಳಲ್ಲಿದ್ದ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ಪಠ್ಯಮಾಹಿತಿಯನ್ನು ಈ ಶಾಲಾತಂತ್ರ ಸಿ.ಡಿ.ಯಲ್ಲಿ ಅಳವಡಿಸಿ ಒಂದೇ ಕಡೆ ಸಿಗುವಂತೆ ಮಾಡಿದ್ದಾರೆ. ಒಂದೇ ಸಿ.ಡಿ.ಯಲ್ಲಿ ಎರಡು ಲಾಭಗಳು! 

ಮೂರೂ ಡಿವಿಡಿಗಳಲ್ಲಿ ತರಗತಿವಾರು ಹಾಗೂ ವಿಷಯವಾರು ಗಣಿತ ಪಾಠಗಳ ಜೊತೆಗೆ ಪಠ್ಯೇತರ ವಿಷಯವಾಗಿ ಗಣಿತಕ್ಕೆ ಭಾರತೀಯರ ಕೊಡುಗೆ, ಅನ್ವೇಷಣೆ, ಮಹತ್ವ, ಇತ್ತೀಚಿನ ಸಂಶೋಧನೆ, ಗಣಿತೇತರ ಆಕರ ಗ್ರಂಥಗಳ ಕುರಿತು ಸುದೀರ್ಘವಾದ ಪ್ರಸ್ತಾವನೆಯ

ವಿಡಿಯೋ, ಸಂದೇಶಗಳು, ಅನಿಸಿಕೆಗಳು, ಗಣಿತ ಅಧ್ಯಯನ ಹೇಗಿರಬೇಕು?, ಗ್ರಾಹಕ ಹಕ್ಕು ಕಾಯಿದೆಯ ಪರಿಚಯ, ಮಾಹಿತಿ ಹಕ್ಕು ಕಾಯಿದೆಯ ಪರಿಚಯ, ವಿದ್ಯುತ್ ಶಕ್ತಿಯ ಮಿತಬಳಕೆ, ನೀರಿನ ಮಿತಬಳಕೆ ಮತ್ತು ನೀರಿಂಗಿಸುವಿಕೆ, ಪರಿಸರ ಮತ್ತು ನಾವು, ಮುಕ್ತ ಮತ್ತು ಉಚಿತ ತಂತ್ರಾಂಶಗಳ ಕುರಿತು ಯಥೇಚ್ಚ ಮಾಹಿತಿ ಸಾಹಿತ್ಯದ ವಿದ್ಯುನ್ಮಾನ ಪ್ರತಿಗಳಿವೆ.  ಹಾಗೆಯೇ ‘ಲೀಲಾವತಿ’ ಗ್ರಂಥದಿಂದ ಆಯ್ದ ಆಸಕ್ತಿದಾಯಕ ಸಮಸ್ಯೆಗಳು, ನಿಜಜೀವನದಲ್ಲಿನ ಉದಾಹರಣೆಗಳು ಮತ್ತು ಸಮಸ್ಯೆಗಳು, ಬ್ಯಾಂಕಿಂಗ್ ಕುರಿತ ಉಪನ್ಯಾಸಗಳು ಕುತೂಹಲ ಕೆರಳಿಸುತ್ತವೆ. 

ಗಣಿತ ಪಠ್ಯಪುಸ್ತಕಗಳಲ್ಲಿರುವ ಅಂಕಗಣಿತ, ಬೀಜಗಣಿತ, ರೇಖಾಗಣಿತ ಪಾಠಗಳನ್ನು ವಿಶೇಷ ವಿವರಣೆಯೊಂದಿಗೆ ಮೂಡಿಸಲು ಇಲ್ಲಿ ಪ್ರಯತ್ನಿಸಲಾಗಿದೆ.  8ನೇ ತರಗತಿಯ ಏಳು ವಿಭಾಗಗಳಲ್ಲಿನ 29 ಉಪನ್ಯಾಸಗಳು, 9ನೇ ತರಗತಿಯ ಏಳು ವಿಭಾಗಗಳಲ್ಲಿನ 23 ಉಪನ್ಯಾಸಗಳು, ಮತ್ತು 10ನೇ ತರಗತಿಯ ಏಳು ವಿಭಾಗಗಳಲ್ಲಿನ 16 ಉಪನ್ಯಾಸಗಳು ಸುದೀರ್ಘ ವಿವರಣೆಗಳು ಮತ್ತು ಸಚಿತ್ರ ನಿರೂಪಣೆಯೊಂದಿಗೆ ನೈಜ ತರಗತಿಯನ್ನೇ ಕಂಪ್ಯೂಟರ್ ಪರದೆಯಮೇಲೆ ಮೂಡಿಸಿಬಿಡುತ್ತವೆ.

ಕೆಲವು ಪಾಠಗಳು ಹತ್ತರಿಂದ ಇಪ್ಪತ್ತು ನಿಮಿಷಗಳ ಅವಧಿಯದಾಗಿದ್ದರೆ ಕೆಲವು ಒಂದು ಗಂಟೆಗೂ ಮಿಗಿಲಾಗಿವೆ.  ವರ್ಗಸಮೀಕರಣದ ಮೇಲಿನ ಪಾಠವೊಂದೇ ಸುಮಾರು ಎರಡುಗಂಟೆಯ ಹತ್ತಿರಕ್ಕೆ ಬರುತ್ತದೆ.  ಈ ಉಪನ್ಯಾಸಗಳ ಜೊತೆಗೆ ಮುದ್ರಿತ ಪಠ್ಯದ ಪಿ.ಡಿ.ಎಫ್. ಪ್ರತಿ, ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿನ ಹೈಪರ್‌ಟೆಕ್ಸ್ಟ್ ಪ್ರತಿಗಳು ಲಗತ್ತಿಸಲ್ಪಟಿವೆ. ಕನ್ನಡ ಪ್ರತಿಯಲ್ಲಿ ಸಮಾಂತರ ಆಂಗ್ಲಪದಗಳನ್ನು ಒದಗಿಸಲಾಗಿದೆ.  ಅಗತ್ಯ ತಂತ್ರಾಂಶಗಳನ್ನು ಈ ಸಿ.ಡಿ.ಯಲ್ಲಿ ಅಳವಡಿಸಿರುವುದು ಇಲ್ಲಿನ ವಿಶೇಷ.

ಇ-ಶಾಲೆ ಎಂಬ ಬೃಹತ್ ಯೋಜನೆಯನ್ನು  ಕೈಗೆತ್ತಿಕೊಂಡಿರುವ ಫ್ರೀಗಣಿತ.ಕಾಂ ವಿದ್ಯಾರ್ಥಿಗಳ, ಶಿಕ್ಷಕರ, ಶಿಕ್ಷಣ ಇಲಾಖೆಯ ಅಮೂಲ್ಯ ಮಾಹಿತಿ ಕಣಜವಾಗಿ ರೂಪುಗೊಳ್ಳುವತ್ತ ದಾಪುಗಾಲು ಹಾಕುತ್ತಿದೆ.  

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : ರಾಜಶೇಖರ ಸೋಮಯಾಜಿ (ಫೋನ್:9880831316)
ಅಂತರಜಾಲ ತಾಣ: www.freeganita.com
www.eshale.org ಇ-ಮೇಲ್: freeganita@gmail.com

School Automation - Shala Tantra Software - 
Article in Prajavani - Shikshana - 27 Dec 2010