Wednesday, September 26, 2018

Book Launch session Report in Kannadaprabha and Prajavani 26 Sept 2018

ದೀನಬಂಧು ಟ್ರಸ್ಟ್‌ ಗೌರವ ಕಾರ್ಯದರ್ಶಿ ಜಿ.ಎಸ್.ಜಯದೇವ

ನಾಗರಿಕತೆ ಹೆಸರಲ್ಲಿ ಶೋಷಣೆ


ಮೈಸೂರಿನಲ್ಲಿ ನವ ಕರ್ನಾಟಕ ಪ್ರಕಾಶನವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದೀನಬಂಧು ಟ್ರಸ್ಟ್‌ ಗೌರವ ಕಾರ್ಯದರ್ಶಿ ಜಿ.ಎಸ್.ಜಯದೇವ ಅವರು ಕೃತಿಗಳನ್ನು ಬಿಡುಗಡೆಗೊಳಿಸಿದರು. ಎನ್‌.ಕೆ.ಸತ್ಯನಾರಾಯಣ, ಸುಮಂಗಲಾ ಎಸ್.ಮುಮ್ಮಿಗಟ್ಟಿ, ಬೇದ್ರೆ ಮಂಜುನಾಥ ಇದ್ದಾರೆ
ಪ್ರಜಾವಾಣಿ ವಾರ್ತೆ
ಮೈಸೂರು: ನಾಗರಿಕತೆಯ ಹೆಸರಿನಲ್ಲಿ ಗಿರಿಜನರನ್ನು ಶೋಷಣೆ ಮಾಡುವುದು ಅಮಾನವೀಯತೆಯ ಪರಮಾವಧಿ ಎಂದು ದೀನಬಂಧು ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಜಿ.ಎಸ್.ಜಯದೇವ ವಿಷಾದ ವ್ಯಕ್ತಪಡಿಸಿದರು.
ನವಕರ್ನಾಟಕ ಪ್ರಕಾಶನವು ಮಂಗಳವಾರ ಹಮ್ಮಿಕೊಂಡಿದ್ದ ‘ಕೊನೆಯ ಅಲೆ’, ‘ನಮ್ಮ ಪ್ರಪಂಚ’, ‘ಇಂಗ್ಲಿಷ್ ಗಾದೆಗಳ ವಿವರಣಾತ್ಮಕ ಕೋಶ’ ಹಾಗೂ ‘ಇಂಗ್ಲಿಷ್ ನುಡಿಗಟ್ಟು ಮತ್ತು ಪಡೆನುಡಿಗಳ ವಿವರಣಾತ್ಮಕ ಕೋಶ’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಗಿರಿಜನರ ಮೇಲೆ ನಡೆದಿರುವಷ್ಟು ಶೋಷಣೆ ಬೇರಾರ ಮೇಲೂ ನಡೆದಿಲ್ಲ. ಅಂಡಮಾನಿನ ಝರವಾಗಳನ್ನು, ನಮ್ಮ ನಡುವಿನ ಸೋಲಿಗರನ್ನು ನಾಗರಿಕತೆಯ ಹೆಸರಿನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅವರಿಗೆ ಕ್ರೂರಿಗಳು ಎಂಬ ಪಟ್ಟ ಕಟ್ಟಲಾಗಿದೆ. ನಾಗರಿಕತೆಗೆ ಅವರನ್ನು ಒಗ್ಗಿಸಲು ಪ್ರಯತ್ನಿಸಿ ಅವರ ಸಮುದಾಯವನ್ನೇ ನಾಮಾವಶೇಶಗೊಳಿಸುವ ಕ್ರೂರ ಪ್ರಯತ್ನಗಳು ನಡೆದಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮನುಷ್ಯ ಮನುಷ್ಯನನ್ನು ಗೌರವಿಸುವುದು ನಾಗರಿಕತೆ. ಆದರೆ, ಮನುಷ್ಯ ಸಮಾಜದಲ್ಲಿ ಪರಸ್ಪರ ಗೌರವ ಎನ್ನುವುದಕ್ಕೆ ಅರ್ಥವೇ ಇಲ್ಲವಾಗುತ್ತಿದೆ. ಇದು ದುಃಖದ ವಿಚಾರ. ನಮ್ಮ ನಾಗರಿಕತೆಯ ಹಿಂದೆ ಬರ್ಬರ ಕ್ರೌರ್ಯ ಹಾಗೂ ಶೋಷಣೆ ಅಡಗಿದೆ. ನಾವು ಇನ್ನೊಬ್ಬರನ್ನು ಬದುಕಲು ಬಿಡಬೇಕು. ಅವರ ಜೀವನ ಪದ್ಧತಿಯನ್ನು ಗೌರವಿಸಬೇಕು. ನಮ್ಮ ಜೀವನ ಪದ್ಧತಿ ಮಾತ್ರವೇ ಶ್ರೇಷ್ಠ; ಇತರರದಲ್ಲ ಎಂಬುದು ನಾಗರಿಕತೆಯ ಲಕ್ಷಣವಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.
ಮಹಿಳಾಪರ ಚಳವಳಿಗಳು ಬಲಗೊಳ್ಳಬೇಕು. ಮಹಿಳೆಯರ ನೋವು ದನಿಯಾಗಿ ಹೊರಬಂದರೆ ಮಾತ್ರ ಅವರ ಸಮಸ್ಯೆ ಪ್ರಪಂಚಕ್ಕೆ ತಿಳಿಯುತ್ತದೆ. ಈ ವಿಚಾರಗಳನ್ನು ಕುರಿತು ಕೃತಿಗಳು ಪ್ರಕಟಗೊಳ್ಳುತ್ತಿರುವುದು ಅಭಿನಂದನಾರ್ಹವಾದುದು. ಲೇಖಕರು ಹಾಗೂ ಪ್ರಕಾಶಕರಿಬ್ಬರೂ ಮೆಚ್ಚುಗೆಗೆ ಪಾತ್ರರು ಎಂದರು.
ಲೇಖಕರಾದ ಬೇದ್ರೆ ಮಂಜುನಾಥ ಹಾಗೂ ಸುಮಂಗಲಾ ಎಸ್.ಮುಮ್ಮಿಗಟ್ಟಿ ಮಾತನಾಡಿದರು. ಎ.ರಮೇಶ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನವ ಕರ್ನಾಟಕ ಪ್ರಕಾಶನದ ಮೈಸೂರು ಶಾಖೆ ವ್ಯವಸ್ಥಾಪಕ ಎನ್.ಕೆ.ಸತ್ಯನಾರಾಯಣ ಸ್ವಾಗತಿಸಿ, ವಂದಿಸಿದರು.