Monday, October 5, 2009

Wildlife MSc. Course at GKVK Campus - Article in Prajavani - Margadarshi - 5th Oct. 2009



ವನ್ಯಜೀವಿ ಅಧ್ಯಯನ: ಹೊಸ ಕೋರ್ಸ್

ಬೇದ್ರೆ ಮಂಜುನಾಥ



ಪ್ರಾಣಿಗಳ ಕಲ್ಯಾಣಕ್ಕಾಗಿ ದುಡಿದ ಅಸಿಸ್ಸಿಯ ಸಂತ ಫ್ರಾನ್ಸಿಸ್‌ರ ಪುಣ್ಯದಿನವಾದ ಅಕ್ಟೋಬರ್ 04 ರಂದು ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಗಿದೆ.


ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ.... ಎಂಬ ಬಸವಣ್ಣನವರ ನುಡಿಯಂತೆ, ಪ್ರಾಣಿಗಳ ಕಲ್ಯಾಣಕ್ಕಾಗಿ ದುಡಿದ ಅಸಿಸ್ಸಿಯ ಸಂತ ಫ್ರಾನ್ಸಿಸ್‌ರ ಪುಣ್ಯದಿನವಾದ ಅಕ್ಟೋಬರ್ 04 ರಂದು ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಗಿದೆ. ಹಾಗೆಯೆ ಅಕ್ಟೋಬರ್ ಮೊದಲ ವಾರ ವನ್ಯಜೀವಿ ಸಂರಕ್ಷಣ ಸಪ್ತಾಹ ಕೂಡ ಇದೆ.

ಪ್ರಾಣಿಗಳೂ ಈ ಜಗತ್ತಿನ ಅಮೂಲ್ಯ ಅಸ್ತಿ. ಅವುಗಳಿಗೂ ಬದುಕುವ ಹಕ್ಕು ಇದೆ. ಅದಕ್ಕಾಗಿ ಪ್ರಾಣಿದಯಾ ಸಂಘಟನೆಗಳು ಕಾರ್ಯನಿರತವಾಗಿವೆ.

ವನ್ಯಜೀವಿಗಳ ಸಂರಕ್ಷಣೆಗೂ ಹಲವು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಕಟಿಬದ್ಧವಾಗಿವೆ. ವಿಶ್ವದ ಎಲ್ಲೆಡೆ ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (Tata Institute of Fundamental Research - TIFR), ಜೀವವಿಜ್ಞಾನಗಳ ರಾಷ್ಟ್ರೀಯ ಕೇಂದ್ರ (The National Centre for Biological Sciences-NCBS), ಜೈವಿಕ ವಿಜ್ಞಾನಗಳ ವಿಭಾಗ (The Department of Biological Sciences - DBS), ವನ್ಯಜೀವಿ ಅಧ್ಯಯನ ಕೇಂದ್ರ (Centre for Wildlife Studies - CWS), ವನ್ಯಜೀವಿ ಸಂರಕ್ಷಣಾ ಸಂಸ್ಥೆ (Wildlife Conservation Society - WCS) ಇವುಗಳ ಸಂಯುಕ್ತ ಆಶ್ರಯದಲ್ಲಿ 2004 ರಿಂದ ವನ್ಯಜೀವಿ ಜೀವಶಾಸ್ತ್ರ ಮತ್ತು ಸಂರಕ್ಷಣೆಯ ಎಂ.ಎಸ್ಸಿ. ಪದವಿ (M.Sc. in Wildlife Biology and Conservation) ಕೋರ್ಸ್ ಹೆಬ್ಬಾಳದ ಜಿ.ಕೆ.ವಿ.ಕೆ. ಕ್ಯಾಂಪಸ್‌ನಲ್ಲಿ ಆರಂಭವಾಗಿದೆ. ವನ್ಯಜೀವಿ ಸಂರಕ್ಷಣೆಯಲ್ಲಿ ಆಸಕ್ತಿ ಇರುವ, ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯಲ್ಲಿ 50%ರಷ್ಟು ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು ಈ ಕೋರ್ಸಿಗೆ ಅರ್ಜಿ ಸಲ್ಲಿಸಬಹುದು.



ಎರಡು ವರ್ಷಗಳ, ನಾಲ್ಕು ಸೆಮಿಸ್ಟರ್‌ಗಳ, ಈ ಕೋರ್ಸ್ ಅಧ್ಯಯನ ಸಂದರ್ಭದಲ್ಲಿ ಎಲ್ಲ ಅಭ್ಯರ್ಥಿಗಳಿಗೂ ಸ್ಕಾಲರ್‌ಶಿಪ್ ದೊರೆಯುತ್ತದೆ. ದೇಶದ 18 ಕೇಂದ್ರಗಳಲ್ಲಿ ಬರುವ ಡಿಸೆಂಬರ್ 13 ರಂದು ನಡೆಸಲಾಗುವ ಪ್ರವೇಶ ಪರೀಕ್ಷೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ದು, ಸಂದರ್ಶನದ ಮೂಲಕ ಅಂತಿಮವಾಗಿ 15 ಅಭ್ಯರ್ಥಿಗಳಿಗೆ ಅಧ್ಯಯನದ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಡಾ. ಕೆ. ಉಲ್ಲಾಸ್ ಕಾರಂತ್, ಡಾ. ಅಜಿತ್ ಕುಮಾರ್, ಡಾ. ಜಗದೀಶ್ ಕೃಷ್ಣಸ್ವಾಮಿ, ಡಾ. ಅನಿಂದ್ಯಾಸಿನ್ಹಾ, ಡಾ. ಮಹೇಶ್ ರಂಗರಾಜನ್, ಡಾ. ಮಹೇಶ್ ಶಂಕರನ್, ಡಾ. ಉಮಾ ರಾಮಕೃಷ್ಣನ್, ಡಾ. ಸುಹೇಲ್ ಖಾದರ್, ಡಾ. ಕೆ.ಎಸ್. ಕೃಷ್ಣನ್ ಇವರೇ ಮೊದಲಾದ ಖ್ಯಾತ ವನ್ಯಜೀವಿಶಾಸ್ತ್ರಜ್ಞರು, ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿರುವ ಮೇಧಾವಿಗಳು, ಪ್ರಾಧ್ಯಾಪಕರುಗಳಿಂದ ತರಬೇತಿ, ಪ್ರಾತ್ಯಕ್ಷಿಕೆ, ಕ್ಷೇತ್ರಭೇಟಿ, ಅರಣ್ಯಗಳಲ್ಲಿ ಅಧ್ಯಯನ ಶಿಬಿರಗಳು, ಸಂಶೋಧನಾ ವ್ಯಾಸಂಗ ಗೋಷ್ಠಿಗಳು, ಅಭಯಾರಣ್ಯಗಳಲ್ಲಿ ವನ್ಯಜೀವಿಗಳೊಂದಿಗೆ ಒಡನಾಟ ಮೊದಲಾದವುಗಳಿಗೆ ಅವಕಾಶ ಇದೆ.

ಈ ಸ್ನಾತಕೋತ್ತರ ಕೋರ್ಸ್‌ಗೆ ಅತ್ಯಂತ ಹೆಚ್ಚಿನ ಬೇಡಿಕೆ ಇದ್ದು ಈಗಾಗಲೇ ಸ್ನಾತಕರಾಗಿ ಹೊರಬಂದವರೆಲ್ಲರಿಗೂ ದೇಶವಿದೇಶಗಳಲ್ಲಿ ಅತ್ಯುತ್ತಮ ಉದ್ಯೋಗ ಹಾಗೂ ಸಂಶೋಧನಾ ಅವಕಾಶಗಳು, ಪ್ರಶಸ್ತಿ, ಪುರಸ್ಕಾರಗಳು ಅರಸಿಕೊಂಡು ಬಂದಿವೆ.

ಮೊದಲ ಸೆಮಿಸ್ಟರ್‌ನಲ್ಲಿ ಜೀವವಿಜ್ಞಾನ, ಸಸ್ಯ, ಪ್ರಾಣಿಜೀವನ, ಗಣಿತ, ಸಂಖ್ಯಾಶಾಸ್ತ್ರ ಮತ್ತು ವನ್ಯಜೀವಿ ಅಧ್ಯಯನ ಕುರಿತಂತೆ ಪಾಠಗಳಿದ್ದರೆ ಎರಡನೇ ಮತ್ತು ಮೂರನೇ ಸೆಮಿಸ್ಟರ್‌ಗಳಲ್ಲಿ ವನ್ಯಜೀವಿ ಅಧ್ಯಯನದಲ್ಲಿ ಆಗಿರುವ ಇತ್ತೀಚಿನ ಬೆಳವಣಿಗೆಗಳು, ಆಧುನಿಕ ತಂತ್ರಜ್ಞಾನದ ಅಳವಡಿಕೆ, ಸಂಪರ್ಕ ವ್ಯವಸ್ಥೆ, ಸಮಸ್ಯಾ ಪರಿಹಾರ ಇತ್ಯಾದಿ ಕಲಿಯುವ ಅವಕಾಶಗಳಿವೆ.

ಕೊನೆಯ ಸೆಮಿಸ್ಟರ್‌ನಲ್ಲಿ ಅಭ್ಯರ್ಥಿಗಳಿಗೆ ಕ್ಷೇತ್ರ ಭೇಟಿ, ಪ್ರಾಜೆಕ್ಟ್ ವರ್ಕ್, ವನ್ಯಜೀವಿ ಸಂರಕ್ಷಣೆಯ ಭವಿಷ್ಯವನ್ನು ಉತ್ತಮಗೊಳಿಸುವ ವಿವಿಧ ಪ್ರಾಜೆಕ್ಟ್‌ಗಳು, ಶಿಬಿರ, ಪ್ರಾತ್ಯಕ್ಷಿಕೆಗಳಲ್ಲಿ ಭಾಗವಹಿಸುವುದು, ಹೊರಾಂಗಣ ಶಿಕ್ಷಣ ಮೊದಲಾದ ಚಟುವಟಿಕೆಗಳಿಗೆ ಅವಕಾಶವಿದೆ. ಪರಿಸರದ ಮಧ್ಯದಲ್ಲಿಯೇ ಕಲಿಯುವ ಸಂತಸದಾಯಕ ವಾತಾವರಣ ಇನ್ನೆಲ್ಲಿ ತಾನೇ ಸಿಗುತ್ತದೆ ಹೇಳಿ?

ವನ್ಯಜೀವಿ ಜೀವಶಾಸ್ತ್ರ ಮತ್ತು ಸಂರಕ್ಷಣೆ ಎಂ.ಎಸ್ಸಿ. ಪದವಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ : 16 ಅಕ್ಟೋಬರ್ 2009.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬಹುದಾದ ವಿಳಾಸಗಳು :ವೆಬ್‌ಸೈಟ್: http://msc.wcsindia.org, www.ncbs.res.in/admissions, ಇ-ಮೇಲ್: mscwildlife@ncbs.res.in, msc@wcsindia.org, ಫೋನ್ : 080-23666414 / 23636421 ಮೊಬೈಲ್:9448360616.

Wildlife MSc. Course at GKVK Campus - Article in Prajavani - Margadarshi - 5th Oct. 2009

No comments: