Wednesday, April 22, 2009

Kannada Grammar - Kannada Vyakarana Pravesha - by T.S.Gopal - A Boon to D.Ed., B.Ed., M.Ed., High School Students and Competitive Exam Aspirants




ಟಿ ಎಸ್ ಗೋಪಾಲರ 'ಕನ್ನಡ ವ್ಯಾಕರಣ ಪ್ರವೇಶ' ಪುಸ್ತಕವು ವಿದ್ಯಾರ್ಥಿ-ಅಧ್ಯಾಪಕ ಇಬ್ಬರಿಗೂ ನೆರವಾಗುತ್ತದೆ, ಓದಿಸಿಕೊಂಡು ಹೋಗುತ್ತದೆ. ಶಾಸ್ತ್ರವನ್ನು ಸುಲಭವಾಗಿ, ತಿಳಿಯಾಗಿ ನಿರೂಪಿಸಿ ಮನಮುಟ್ಟಿಸುವ ಕಲೆ ಗೋಪಾಲ್ ಅವರಿಗೆ ಹೃದ್ಗತವಾಗಿದೆ.ಅಕ್ಷರಗಳಿಂದ ಪತ್ರಲೇಖನದ ತನಕ, ಗಾದೆಮಾತು-ಪ್ರಬಂಧ, ತತ್ಸಮ-ತದ್ಭವಗಳು, ನಾನಾರ್ಥ-ಸಮಾನಾರ್ಥ-ವಿರುದ್ಧಾರ್ಥ ಪದಗಳು, ನುಡಿಗಟ್ಟು - ಈ ಎಲ್ಲ ವಿವರಗಳನ್ನೂ ಎಳೆಎಳೆಯಾಗಿ ಹಂತಹಂತವಾಗಿ ನಿರೂಪಿಸಿರುವ ಈ ಪುಸ್ತಕವು ವಿದ್ಯಾರ್ಥಿ-ಅಧ್ಯಾಪಕರಿಗೆ ಕೇವಲ ಕಲಿಕೆಗಷ್ಟೇ ಅಲ್ಲ , ಒಂದು ಆಕರ-ಮಾದರಿಯಾಗಿ ಬಹುಕಾಲ ಉಳಿಯುವ ಕೃತಿಯಾಗಿದೆ.ಪೂಜ್ಯ ಡಿಎಲ್‌ಎನ್ ಅವರ 'ಶಬ್ದವಿಹಾರ', ತೀನಂಶ್ರೀ ಅವರ 'ಕನ್ನಡ ಮಧ್ಯಮ ವ್ಯಾಕರಣ' ಇವೆಲ್ಲದರ ಗುಣ, ಆಂತರಿಕ ಸ್ವಾರಸ್ಯ 'ಕನ್ನಡ ವ್ಯಾಕರಣ ಪ್ರವೇಶ'ದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಗೋಪಾಲರಿಂದ ಇಂಥ ಉಪಯುಕ್ತ ಆಕರ ಗ್ರಂಥಗಳು ಹೀಗೆಯೇ ಮೂಡಿಬರಲೆಂದು ಹಾರೈಸುತ್ತೇನೆ.
- ಡಾ ಎನ್ ಕೆ ರಾಮಶೇಷನ್, ಮೈಸೂರು


ಕನ್ನಡ ಕಲಿತವರಿಗೆ, ಕಲಿಯುವವರಿಗೆ, ವ್ಯಾಕರಣ ಎಂಬ ಕಬ್ಬಿಣದ ಅರಗಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಕೆಲವೊಮ್ಮೆ ಈ ಸಂಧಿ, ಸಮಾಸ, ತತ್ಸಮ, ತದ್ಭವಗಳು, ಕಾಲ, ಕ್ರಿಯೆ, ಪ್ರಯೋಗ, ಛಂದಸ್ಸುಗಳ ಚಕ್ರಬಿಮ್ಮನ ಕೋಟೆಯಲ್ಲಿ ದಾರಿ ತಪ್ಪಿ ಸಾಕಪ್ಪಾ ಸಾಕು ಎನಿಸಿಬಿಡುತ್ತದೆ. ಅಂತಹ ಕಬ್ಬಿಣದ ಕಡಲೆಯನ್ನು ಮೆತ್ತಗಾಗಿಸಿ, ಹುರಿದು, ಮಸಾಲೆ ಹಚ್ಚಿದ ರುಚಿಯಾದ ಹುರಿಗಡಲೆಮಾಡಿ ತಿನ್ನಲು ಕೊಟ್ಟಿದ್ದಾರೆ ಶ್ರೀ ಟಿ.ಎಸ್. ಗೋಪಾಲ್ ಅವರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುಪಯುಕ್ತ
ಕನ್ನಡ ವ್ಯಾಕರಣ ಪ್ರವೇಶ
ಕೃತಿ : ಕನ್ನಡ ವ್ಯಾಕರಣ ಪ್ರವೇಶ
(ಭಾಷಾಭ್ಯಾಸ ಹಾಗೂ ಮಾದರಿ ಉತ್ತರಗಳು)
ಕೃತಿಕಾರರು : ಟಿ. ಎಸ್. ಗೋಪಾಲ್
ಪ್ರಕಾಶಕರು : ಭಾರತೀ ಪ್ರಕಾಶನ, ಸರಸ್ವತೀಪುರಂ, ಮೈಸೂರು - 09
ಪುಟಗಳು : 212 ಆರನೇ ಜನಪ್ರಿಯ ಮುದ್ರಣ : 2009
ಬೆಲೆ : ರೂ. 50-00
ಇದು ಸ್ಪರ್ಧಾತ್ಮಕ ಪರೀಕ್ಷೆಗಳು ಸಾಲು ಸಾಲಾಗಿ ಬರುತ್ತಿರುವ ಸ್ಪರ್ಧಾಕಾಲ! ಬಿ.ಇಡಿ., ಡಿ.ಇಡಿ. ಸಿ.ಇ.ಟಿ. ನೇಮಕಾತಿ ಪರೀಕ್ಷೆ, ಉಪನ್ಯಾಸಕರು, ಮುಖ್ಯಶಿಕ್ಷಕರ ಆಯ್ಕೆ ಪರೀಕ್ಷೆ, ಕೇಂದ್ರ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿರುವ ವಿವಿಧ ಆಯ್ಕೆ ಪರೀಕ್ಷೆಗಳು, ರೈಲ್ವೇ, ಬ್ಯಾಂಕಿಂಗ್ ಇನ್ನಿತರೇ ಕ್ಷೇತ್ರಗಳಲ್ಲಿ ಸಿಬ್ಬಂದಿ ನೇಮಕಾತಿಗಾಗಿ ನಡೆಸುವ ಸ್ಪಧರ್ಾತ್ಮಕ ಪರೀಕ್ಷೆಗಳು ವರ್ಷವಿಡೀ ನಡೆಯುತ್ತಲೇ ಇರುತ್ತವೆ. ಈ ಆಯ್ಕೆ ಪರೀಕ್ಷೆಗಳಲ್ಲಿ ಕನ್ನಡದ ಅಭ್ಯರ್ಥಿಗಳಿಗೆ 'ಕಡ್ಡಾಯ ಕನ್ನಡ ಪತ್ರಿಕೆ' ಇದ್ದು ಅದರಲ್ಲಿ 100, 150 ಇಲ್ಲವೇ 300 ಅಂಕಗಳ ಪ್ರಶ್ನೆಗಳಿಗೆ ಕನಿಷ್ಟ 35% ರಷ್ಟು ಅಂಕಗಳಿಸುವ ಅನಿವಾರ್ಯತೆ ಇದೆ. ಈ 'ಕಡ್ಡಾಯ ಕನ್ನಡ ಪತ್ರಿಕೆ'ಗೆ ಸೂಕ್ತ ಎನಿಸುವ ಕನ್ನಡ ವ್ಯಾಕರಣ ಕೃತಿಯ ಕೊರತೆ ಬಹಳ ವರ್ಷಗಳಿಂದ ಎದ್ದುಕಾಣುತ್ತಿತ್ತು. ಇದೀಗ ಮಾರುಕಟ್ಟೆಗೆ ಬಂದಿರುವ, ಆರು ಜನಪ್ರಿಯ ಮುದ್ರಣಗಳನ್ನು ಕಂಡಿರುವ, ಕೊಡಗಿನ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಟಿ.ಎಸ್. ಗೋಪಾಲ್ ಅವರು ರಚಿಸಿರುವ 'ಕನ್ನಡ ವ್ಯಾಕರಣ ಪ್ರವೇಶ' ಕೃತಿ ಕಡ್ಡಾಯ ಕನ್ನಡ ಪತ್ರಿಕೆ ಬಿಡಿಸುವವರಿಗೆ ಮಾತ್ರವಲ್ಲದೇ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅಗತ್ಯಮಾಹಿತಿ ಒದಗಿಸುತ್ತದೆ.
'ಕಡ್ಡಾಯ ಕನ್ನಡ ಪತ್ರಿಕೆ'ಯಲ್ಲಿ ನೀಡಲಾಗುವ ಸಮಾನಾರ್ಥಕ, ವಿರುದ್ಧಾರ್ಥಕ, ತತ್ಸಮ-ತದ್ಭವ, ನಾನಾರ್ಥ ಪದಗಳು, ಜೋಡುನುಡಿ, ದ್ವಿರುಕ್ತಿ, ಪ್ರತಿಧ್ವನಿತ ಶಬ್ದ, ನುಡಿಗಟ್ಟುಗಳು, ಗಾದೆಗಳ ವಿಸ್ತರಣೆ, ಛಂದಸ್ಸು, ಅಲಂಕಾರ, ಸಂಧಿ, ಸಮಾಸ, ವ್ಯಾಕರಣಾಂಶಗಳ ವಿಸ್ತೃತ ಪರಿಚಯದ ಜೊತೆ ಪತ್ರಲೇಖನ, ಗಾದೆಮಾತುಗಳ ವಿಸ್ತರಣೆ, ಪ್ರಬಂಧ ರಚನೆಯ ಮಾದರಿಗಳು 'ಕನ್ನಡ ವ್ಯಾಕರಣ ಪ್ರವೇಶ' ಕೃತಿಯಲ್ಲಿ ಅಡಕವಾಗಿವೆ.
ಕನ್ನಡವು ಧ್ವನ್ಯಾತ್ಮಕ ಭಾಷೆಯಾಗಿರುವುದರಿಂದ ಕನ್ನಡದ ಧ್ವನಿ, ಲಿಪಿ, ಅಕ್ಷರ, ವರ್ಣ, ಧ್ವನಿಮಾ, ವರ್ಣಮಾಲೆ, ಉಚ್ಚಾರಣಾಂಗಗಳು, ಸ್ವರ ಮತ್ತು ವ್ಯಂಜನಗಳ ಉಚ್ಚಾರಣಾ ಶೈಲಿಯಲ್ಲಿ ನಾಲಗೆಯ ಪಾತ್ರ, ಸ್ಥಾನದ ವಿವರಣೆಯಿಂದ ಆರಂಭವಾಗುವ ಈ ಕೃತಿ ವ್ಯಾಕರಣ ಕಲಿಕೆಯನ್ನು ಸರಳಗೊಳಿಸುವುದಷ್ಟೇ ಅಲ್ಲ, ಇಲ್ಲಿ ಕೊಟ್ಟಿರುವ ಭಾಷಾಭ್ಯಾಸದ ಪ್ರಶ್ನೆ-ಉತ್ತರಗಳು ಮತ್ತು ವಿವರಣೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತರಿಸಲು ಅಗತ್ಯವಾದ ಪೂರ್ವತಯಾರಿಯನ್ನು ನೀಡುತ್ತವೆ. ಇಂಗ್ಲಿಷ್ನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷ್ಗೆ ಅನುವಾದಿಸುವ ಅಭ್ಯಾಸವೊಂದನ್ನು ಸೇರಿಸಿದಲ್ಲಿ ಐ.ಎ.ಎಸ್., ಕೆ.ಎ.ಎಸ್. ಮತ್ತು ಕೆ.ಇ.ಎಸ್. ಪರೀಕ್ಷೆಗಳಲ್ಲಿ ಕೇಳಲಾಗುವ 'ಕಡ್ಡಾಯ ಕನ್ನಡ ಪತ್ರಿಕೆ'ಯ ಎಲ್ಲ ಅಂಶಗಳಿಗೂ ಶ್ರೀ ಟಿ.ಎಸ್. ಗೋಪಾಲ್ ಅವರ 'ಕನ್ನಡ ವ್ಯಾಕರಣ ಪ್ರವೇಶ' ಕೃತಿ ಸಮರ್ಪಕ ಸ್ಪರ್ಧಾ ಕೈಪಿಡಿಯಾಗುತ್ತದೆ. ಕೇಶಿರಾಜನಿಂದ ಹಿಡಿದು ನವಕನರ್ಾಟಕ ಕನ್ನಡ ವ್ಯಾಕರಣ ಕೃತಿಗಳವರೆಗೆ ಕನ್ನಡ ಭಾಷಾಭ್ಯಾಸ ಮಾಡಿಸುವ ನೂರಾರು ಕೃತಿಗಳ ಭರಾಟೆಯ ನಡುವೆಯೇ ಶ್ರೀ ಟಿ.ಎಸ್. ಗೋಪಾಲ್ ಅವರ 'ಕನ್ನಡ ವ್ಯಾಕರಣ ಪ್ರವೇಶ' ಕೃತಿ ಸರಳವಾದ ನಿರೂಪಣೆಯೊಂದಿಗೆ ವಿದ್ಯಾಥರ್ಿಗಳ, ಸ್ಪರ್ಧಾರ್ಥಿಗಳ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಗಿದೆ.

No comments: