


| ||||||
ಶ್! ಗಲಾಟೆ ಮಾಡಬೇಡಿ, ಪರೀಕ್ಷಾ ಸಿದ್ಧತೆಯಲ್ಲಿದ್ದೇವೆ | ||||||
ಬೇದ್ರೆ ಮಂಜುನಾಥ | ||||||
ಇದು ಧ್ವನಿಮುದ್ರಿತ ಮತ್ತು ವಿದ್ಯುನ್ಮಾನ ಪುಸ್ತಕಗಳ ಕಾಲ. ಪರೀಕ್ಷಾ ಸಿದ್ಧತೆ ಕುರಿತಂತೆ ಹತ್ತಾರು ಅಡಕಮುದ್ರಿಕೆಗಳು, ವಿದ್ಯುನ್ಮಾನ ಪುಸ್ತಕಗಳು ಅಂತರಜಾಲದಲ್ಲಿ ಲಭ್ಯವಿವೆ. | ||||||
ಇನ್ನು ಒಂದೆರಡು ತಿಂಗಳಲ್ಲಿ ಪಿ.ಯು.ಸಿ., ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆ ಎಂಬ ಹಬ್ಬಗಳು ಬರುತ್ತಿವೆ. ಪರೀಕ್ಷೆ ಎಂದರೆ ಅದೊಂದು ಸ್ಪರ್ಧಾ ಕಣ, ರಣರಂಗ, ಬಾಕ್ಸಿಂಗ್ ರಿಂಗ್ ಎಂಬ ಭಾವನೆ ಕ್ರಮೇಣ ಬದಲಾಗುತ್ತಾ ಬಂದು ಈಗ ಅದೊಂದು ಯಶಸ್ಸಿನ ಮೆಟ್ಟಿಲು, ಕಲಿಕೆಯನ್ನು ಒರೆಗೆ ಹಚ್ಚುವ ಕಲೆ, ಹಬ್ಬ ಎಂಬ ಪರಿಕಲ್ಪನೆ ಬಲವಾಗುತ್ತಿದೆ. ಪರೀಕ್ಷೆಗೆ ಹೋಗುವುದೇ ಒಂದು ಸಂಭ್ರಮದ ಸಂಗತಿಯಾಗುತ್ತಿದೆ. ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ? ಎನ್ನುವ ಶಿಕ್ಷಣತಜ್ಞ ಅರವಿಂದ ಚೊಕ್ಕಾಡಿಯವರ ಕೃತಿ ಈಗಾಗಲೇ ಏಳು ಮುದ್ರಣಗಳನ್ನು ಕಂಡಿದ್ದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹತ್ತಾರು ಸಲಹೆ ಸೂಚನೆಗಳನ್ನು ನೀಡುತ್ತಿದೆ. ‘ಪರೀಕ್ಷೆ ಒಂದು ಹಬ್ಬ : ಸಂಭ್ರಮಿಸಿ’ ಎಂಬ ಕೃತಿಯ ಮೂಲಕ ವಿದ್ಯಾರ್ಥಿಗಳಿಗೆ ಅಧ್ಯಯನ ಮತ್ತು ಪರೀಕ್ಷಾ ಗೆಲುವಿನ ಹೆಜ್ಜೆಗಳನ್ನು ಹೇಳಿಕೊಡುತ್ತಿರುವ ಅಂತರರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ಆರ್. ಎ. ಚೇತನ್ ರಾಂ ಹತ್ತಾರು ಸೂತ್ರಗಳನ್ನು ರಚಿಸಿ, ಜಗತ್ತಿನಲ್ಲಿ ಪ್ರತಿಭಾವಂತರಲ್ಲದವರು ಯಾರೂ ಇಲ್ಲ, ಸಿದ್ಧತೆ ಮತ್ತು ಅವಕಾಶಗಳ ಹದವಾದ ಮಿಶ್ರಣವೇ ಯಶಸ್ಸು ಎನ್ನುತ್ತಾರೆ. ಓದಿದರೆ ಖುಷಿಯಾಗುವಂತೆ ಬರೆಯಬೇಕು, ಅನಗತ್ಯವಾದುದನ್ನು ಬರೆಯಬಾರದು, ಅಗತ್ಯವಾದುದನ್ನು ಬರೆಯದೇ ಇರಬಾರದು, ಸೂತ್ರ ತಿಳಿಯದೇ ಯಶಸ್ಸಿಲ್ಲ, ಕಷ್ಟಪಡದೇ ಫಲವಿಲ್ಲ ಎನ್ನುವ ಎಚ್ಚರಿಕೆಯನ್ನೂ ನೀಡುತ್ತಾರೆ. ಮತ್ತೊಬ್ಬ ಶಿಕ್ಷಣ ತಜ್ಞ ಪಿ. ಚಂದ್ರಶೇಖರಯ್ಯ ಅವರ ‘ಪರಿಣಾಮಕಾರಿ ಓದು, ಏನು? ಹೇಗೆ?’ ಕೃತಿ ಪರೀಕ್ಷೆಗಷ್ಟೇ ಅಲ್ಲದೇ ಜೀವನಕ್ಕೆ ಉಪಯುಕ್ತವಾಗುವ ಓದಿನ ಪರಿಯನ್ನು ಹೇಳಿಕೊಡುತ್ತಿದೆ.
ನಿರ್ದಿಷ್ಟ ತರಗತಿಯ, ನಿರ್ದಿಷ್ಟ ವಿಷಯಗಳ ಪರೀಕ್ಷಾ ಸಿದ್ಧತೆಗೆಂದೇ ಮೀಸಲಾದ ಹಲವು ಪುಸ್ತಕಗಳು ಮಾರುಕಟ್ಟೆಗೆ ಬಂದಿವೆ. ಶಾಲಾ ಕಾಲೇಜು ಪಠ್ಯಪುಸ್ತಕ, ನೋಟ್ಸ್‌ಗಳ ಜೊತೆ ಹುಮ್ಮಸ್ಸು ಇಮ್ಮಡಿಗೊಳಿಸುವ ಪರೀಕ್ಷಾ ಸಿದ್ಧತೆಯ ಕೈಪಿಡಿಗಳನ್ನು, ಭಾಷಣಗಳನ್ನು ಓದಿ, ಕೇಳಿ, ಬರೆಯುವ ವಿಧಾನದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ಯಶಸ್ಸು ನಿಮ್ಮದೇ. ಪರೀಕ್ಷೆಗಳು ನಮ್ಮ ಜ್ಞಾನದ ಮಟ್ಟವನ್ನು ಅಳೆಯುವ ಅಳತೆಗೋಲುಗಳಷ್ಟೇ ಅಲ್ಲ ನಮ್ಮ ಭವಿಷ್ಯತ್ತಿಗೆ ಭದ್ರ ಬುನಾದಿ ಒದಗಿಸುವ ಅಂಕಪಟ್ಟಿ ಎಂಬ ರಹದಾರಿ ಪತ್ರಗಳನ್ನೂ ನೀಡುತ್ತವೆ. ಪೋಷಕರ ಅಗಾಧ ನಿರೀಕ್ಷೆಗಳನ್ನು, ನಿಮ್ಮ ಕನಸುಗಳನ್ನು ನನಸಾಗಿಸಲು ಇರುವ ಪರೀಕ್ಷೆ ಎಂಬ ಸವಾಲನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಿದಲ್ಲಿ ಯಾವುದೂ ಕಷ್ಟವಾಗಲಾರದು. ಪರೀಕ್ಷೆಗೆ ಮುನ್ನ ಉಳಿದಿರುವ ಕೆಲವೇ ದಿನಗಳಲ್ಲಿ, ಪೂರ್ವಸಿದ್ಧತಾ ಪರೀಕ್ಷೆಗಳನ್ನೂ ಸೇರಿಸಿಕೊಂಡು, ಸ್ವತಃ ಒಂದಷ್ಟು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಉತ್ತರಿಸುವ ಪರಿಪಾಠ ಬೆಳೆಸಿಕೊಳ್ಳುವ ಈ ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಪರೀಕ್ಷಾರ್ಥಿಗಳಿಗೆ ಎಲ್ಲ ರೀತಿಯ ನೆರವನ್ನೂ ನೀಡೋಣ. ಟಿ.ವಿ., ಟೇಪ್ ರೆಕಾರ್ಡರ್, ಸಿ.ಡಿ. ಪ್ಲೇಯರ್, ಧ್ವನಿವರ್ಧಕಗಳ ಧ್ವನಿಯನ್ನು ತಗ್ಗಿಸೋಣ. ಅಬ್ಬರಿಸದೇ, ತಗ್ಗಿದ ಸ್ವರದಲ್ಲಿ ಮಾತಾಡುತ್ತಾ ಪ್ರಶಾಂತವಾದ ಓದುವ ವಾತಾವರಣವನ್ನು ಕಲ್ಪಿಸಿಕೊಡೋಣ. ಪರೀಕ್ಷಾ ಸಂಭ್ರಮದಲ್ಲಿ ಪಾಲ್ಗೊಳ್ಳೋಣ. ಅಲ್ಲವೇ? |
No comments:
Post a Comment