Monday, July 12, 2010

Meena Task Force - Article in Prajavani Daily - Education Supplement - 12 July 2010



Meena Task Force
Article in Prajavani Daily Education Supplement - 12 July 2010

ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮೀನಾ ಕಾರ್ಯ ಪಡೆ

ಬೇದ್ರೆ ಮಂಜುನಾಥ



ಕರ್ನಾಟಕ ಸರ್ಕಾರ ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳಲ್ಲಿ ಹೆಣ್ಣುಮಕ್ಕಳ ವಿಶೇಷ ಶಿಕ್ಷಣಕ್ಕಾಗಿ ಆರಿಸಿದ ಕ್ಲಸ್ಟರ್‌ಗಳಲ್ಲಿ ‘ಮೀನಾ ತಂಡ’ಗಳನ್ನು ರಚಿಸಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿತ್ತು. ಇದನ್ನು ಎಲ್ಲ ಶಾಲೆಗಳಿಗೂ ವಿಸ್ತರಿಸಲು ಉದ್ದೇಶಿಸಿದೆ.


ಮೀನಾ ಎಂಬ ಪುಟ್ಟ ಬಾಲೆಯ ಸಾಹಸಗಳನ್ನು ಈಗಾಗಲೇ ನೀವೆಲ್ಲಾ ದೂರದರ್ಶನದ ಹಲವು ಕಾರ್ಯಕ್ರಮಗಳಲ್ಲಿ ನೋಡಿರಬಹುದು. ಮೀನಾಳ ತಮ್ಮ ರಾಜು ಮತ್ತು ಮುದ್ದು ಗಿಳಿ ಮಿಟ್ಟು ಮಕ್ಕಳಷ್ಟೇ ಅಲ್ಲದೆ ಹಳ್ಳಿಗರೆಲ್ಲರ ಮನ ಸೆಳೆದಿದ್ದಾರೆ.

ಸಾಮಾಜಿಕ ಬದಲಾವಣೆ ತರುವಲ್ಲಿ ಯಶಸ್ವಿಯಾದ ಈ ‘ಮೀನಾ’ ಪರಿಕಲ್ಪನೆ ದಕ್ಷಿಣ ಏಷ್ಯಾದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಯೂನಿಸೆಫ್ ರೂಪಿಸಿದ ವಿಶೇಷ ಕಾರ್ಯಕ್ರಮದ ಅಂಗವಾಗಿ 1990ರ ದಶಕದ ಕೊನೆಯಲ್ಲಿ ಕಾರ್ಯರೂಪಕ್ಕೆ ಬಂದಿತು.

1998ರ ಸೆಪ್ಟೆಂಬರ್ 24 ರಂದು ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಪಾಕಿಸ್ತಾನಗಳಲ್ಲಿ ಈ ‘ಮೀನಾ’ ಪರಿಕಲ್ಪನೆ ಶಿಕ್ಷಣ ಕ್ಷೇತ್ರವನ್ನು ವಿಧ್ಯುಕ್ತವಾಗಿ ಪ್ರವೇಶಿಸಿದ್ದರಿಂದ ಪ್ರತಿ ವರ್ಷ ಸೆಪ್ಟೆಂಬರ್ 24ನ್ನು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ‘ಮೀನಾ ದಿನ’ವನ್ನಾಗಿ ಆಚರಿಸಲಾಗುತ್ತದೆ.


ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿರುವ ಬಡತನ, ಅನಕ್ಷರತೆ, ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಜೀತ ಪದ್ಧತಿ, ಭಿಕ್ಷಾಟನೆಗಳನ್ನು ಹೊಡೆದೋಡಿಸಿ, ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ, ಎಲ್ಲರಿಗೂ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಒಂಬತ್ತು ವರ್ಷದ ಬಾಲೆ ಮೀನಾ ಸಾಹಸಗಳ ಸುಮಾರು 33 ಕಾರ್ಟೂನ್ ಪುಸ್ತಕಗಳು ಮತ್ತು ಪುಟ್ಟ ಚಲನಚಿತ್ರಗಳು ಕಳೆದ ಹದಿಮೂರು ವರ್ಷಗಳಲ್ಲಿ ಜನ ಮನ ಸೂರೆಗೊಂಡಿವೆ.
ದಕ್ಷಿಣ ಏಷ್ಯಾದ ಎಲ್ಲ ಭಾಷೆಗಳಿಗೆ ಮತ್ತು ವಿಶ್ವದ ಪ್ರಮುಖ ಭಾಷೆಗಳಿಗೆ ತರ್ಜುಮೆ ಹೊಂದಿರುವ ಈ ಮಾಹಿತಿ ಸಾಹಿತ್ಯ ತೃತೀಯ ವಿಶ್ವದ ಜನಪ್ರಿಯ ಕಾರ್ಯಕ್ರಮವಾಗಿದೆ.

(ಇವುಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಲು ಈ ಜಾಲತಾಣಗಳನ್ನು ಸಂಪರ್ಕಿಸಿರಿ:
http://www.unicef.org/rosa/media_2479.htm http://www.unicef.org/rosa/media_2512.htm )
ಕರ್ನಾಟಕ ಸರ್ಕಾರ ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳಲ್ಲಿ ಹೆಣ್ಣುಮಕ್ಕಳ ವಿಶೇಷ ಶಿಕ್ಷಣಕ್ಕಾಗಿ ಆರಿಸಿದ ಕ್ಲಸ್ಟರ್‌ಗಳಲ್ಲಿ ಈ ‘ಮೀನಾ ತಂಡ’ಗಳನ್ನು ರಚಿಸಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿತ್ತು.

ಇದೀಗ ಈ ಜನಪ್ರಿಯ ಕಾರ್ಯಕ್ರಮವನ್ನು ರಾಜ್ಯ ಎಲ್ಲ ಶಾಲೆಗಳಿಗೂ ವಿಸ್ತರಿಸುವ ಉದ್ದೇಶದಿಂದ ಮೀನಾ ಪರಿಷ್ಕತ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ. ಈಗಾಗಲೇ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ, ಪಠ್ಯ ಸಾಮಗ್ರಿ ರಚನಾ ಕಾರ್ಯಾಗಾರ ಯಶಸ್ವಿಯಾಗಿದೆ. ಈ ಬಾರಿಯ ‘ಮೀನಾ ದಿನಾಚರಣೆ’ಯ ವೇಳೆಗೆ ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಮೀನಾ ತಂಡಗಳ ರಚನೆ, ಕಾರ್ಯಾಚರಣೆ ಆರಂಭವಾಗಬೇಕಿದೆ.

ಈಗಾಗಲೇ ಇದೇ ಆಶಯ ಇರುವ ವಿದ್ಯಾರ್ಥಿ ಕಾರ್ಯಪಡೆಯ ಮಾದರಿ ಚಿತ್ರದುರ್ಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸರ್ವಶಿಕ್ಷಾ ಅಭಿಯಾನ ಯೋಜನೆಯ ಆವಿಷ್ಕೃತ ಚಟುವಟಿಕೆಯ ಭಾಗವಾಗಿ ಚಿತ್ರದುರ್ಗದ ದಾವಣಗೆರೆ ರಸ್ತೆಯ ಬೋವಿ ಕಾಲನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕ ಪಿ. ಚಂದ್ರಶೇಖರಯ್ಯ ಅವರು ಕಳೆದ ವರ್ಷ ಆರಂಭಿಸಿದ ವಿದ್ಯಾರ್ಥಿ ಕಾರ್ಯಪಡೆ (ಸ್ಟೂಡೆಂಟ್ ಟಾಸ್ಕ್ ಫೋರ್ಸ್) ಇದು.

ಈ ವಿದ್ಯಾರ್ಥಿ ಕಾರ್ಯಪಡೆಯಲ್ಲಿ ಹದಿನೈದು ಬಾಲಕರು ಹಾಗೂ ಹದಿನೈದು ಬಾಲಕಿಯರು ಸೇರಿದ್ದು ಇವರ ನೇತೃತ್ವವನ್ನು ವಹಿಸಿಲು ಇಬ್ಬರು ವಿದ್ಯಾರ್ಥಿಗಳನ್ನು ನೇಮಿಸಲಾಗಿದ್ದು ಅವರನ್ನು ಟ್ರೂಪ್ ಕಮಾಂಡರ್ಸ್‌ ಎಂದು ಹೆಸರಿಸಲಾಗಿದೆ.

ಶಾಲಾ ಮಕ್ಕಳಲ್ಲಿ ಹಾಜರಾತಿಯನ್ನು ಉತ್ತಮಪಡಿಸುವುದು, ಕಲಿಕಾ ವಿಷಯಗಳಲ್ಲಿ ಉತ್ತಮ ಪ್ರಗತಿ ಸಾಧಿಸುವ ಮೂಲಕ ಧನಾತ್ಮಕ ಮನೋಭಾವವನ್ನು ರೂಢಿಸುವುದು, ಶಿಸ್ತು, ಸಂಯಮದ ಜೀವನ, ದೈಹಿಕ ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಿ ಉತ್ತಮ ಹವ್ಯಾಸಗಳನ್ನು ಬೆಳೆಸುವುದು ಮತ್ತು ನಾಯಕತ್ವ ಗುಣ, ಸಹಕಾರ ತತ್ವ, ಅರ್ಪಣಾ ಮನೋಭಾವವನ್ನು ಜಾಗೃತಗೊಳಿಸುವುದು ಇವೇ ಮುಖ್ಯ ಉದ್ದೇಶಗಳಿಂದ ಆರಂಭವಾಗಿರುವ ವಿದ್ಯಾರ್ಥಿ ಕಾರ್ಯಪಡೆಯ ಚಟುವಟಿಕೆಗಳಿಂದಾಗಿ ಈಗ ಆ ಶಾಲೆಯಲ್ಲಿ ಹಾಜರಾತಿ ಉತ್ತಮಗೊಂಡಿದೆ. ಮಕ್ಕಳು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

EACH ONE TEACH FOUR ಸೂತ್ರದಂತೆ ವಿದ್ಯಾರ್ಥಿ ಕಾರ್ಯಪಡೆಯ ಪ್ರತಿ ಸದಸ್ಯನಿಗೂ ತನ್ನ ತರಗತಿಯ ಅಥವಾ ತನಗಿಂತ ಕೆಳಗಿನ ತರಗತಿಯ ಮೂರು ಜನ ವಿದ್ಯಾರ್ಥಿಗಳನ್ನು ದತ್ತು ನೀಡಿದ್ದು ಸದಸ್ಯರು ತಮಗೆ ವಹಿಸಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಭಾರಗಳ ಬಗ್ಗೆ ನಿಗಾ ವಹಿಸಿ ಅವರಿಗೆ ಅಗತ್ಯ ನೆರವು, ಸಲಹೆ ನೀಡಿ ತಮ್ಮ ಗುಂಪಿನ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಕಾರಣೀಭೂತರಾಗಿದ್ದಾರೆ. ತಾವೂ ಕಲಿಯುತ್ತಾ ಇತರರನ್ನೂ ಕಲಿಕೆಯತ್ತ ಕರೆದೊಯ್ಯುವಲ್ಲಿ ವಿದ್ಯಾರ್ಥಿ ಕಾರ್ಯಪಡೆ ಸದಸ್ಯರು ಸಫಲರಾಗಿದ್ದಾರೆ.

ಈ ವಿದ್ಯಾರ್ಥಿ ಕಾರ್ಯಪಡೆ ಅನುಷ್ಠಾನದಿಂದ ಶಾಲಾ ಪರಿಸರ, ಶೈಕ್ಷಣಿಕ ಗುಣಮಟ್ಟ ಮತ್ತು ಸಾಂಸ್ಕತಿಕ ನೆಲೆಗಟ್ಟಿನ ಮೇಲೆ ಆದ ಪ್ರಭಾವಗಳು ಮತ್ತು ಬೀರಿದ ಪರಿಣಾಮಗಳು ಗಮನಾರ್ಹವಾಗಿದೆ. ವಿದ್ಯಾರ್ಥಿ ಕಾರ್ಯಪಡೆಯ ಸದಸ್ಯರ ಹಾಜರಾತಿಯು ಶೇಕಡ 100ರಷ್ಟು ದಾಖಲಾಗಿದ್ದು, ಶಾಲೆಯ ಇತರ ಮಕ್ಕಳೂ ನಿರಂತರವಾಗಿ ಹಾಜರಾತಿ ದಾಖಲಿಸುವಲ್ಲಿ ಪ್ರೇರಣೆಯಾಗಿದ್ದಾರೆ.

ಶಾಲಾ ಮಕ್ಕಳಲ್ಲಿ ಸ್ವಯಂ ಶಿಸ್ತು, ಸಂಯಮ, ಸೌಜನ್ಯ ವರ್ತನೆಯನ್ನು ಕಾಣಲು ಸಾಧ್ಯವಾಗಿದೆ. ವಿದ್ಯಾರ್ಥಿ ಕಾರ್ಯಪಡೆಯ ಮಕ್ಕಳು ವೈಯಕ್ತಿಕ ಸ್ವಚ್ಛತೆ, ಸಿದ್ಧತೆಯನ್ನು ಅನುಸರಿಸುತ್ತಿರುವುದರಿಂದ ಶಾಲೆಯ ಇತರ ಮಕ್ಕಳು ಸ್ವಯಂ ಪ್ರೇರಣೆಯಿಂದ ವೈಯಕ್ತಿಕ ಸ್ವಚ್ಛತೆ ಕಡೆಗೆ ಗಮನ ನೀಡಿರುವುದು ಕಾಣಬರುತ್ತಿದೆ.

ವಿರಾಮ ವೇಳೆಯ ನಿರ್ವಹಣೆ, ಬಯಲು ಗ್ರಂಥಾಲಯ ನಿರ್ವಹಣೆ ಸಾಂಸ್ಕತಿಕ ಕಾರ್ಯಕ್ರಮ, ದಿನಾಚರಣೆಗಳ ಆಚರಣೆ ಸಂದರ್ಭದಲ್ಲಿ ವಿದ್ಯಾರ್ಥಿ ಕಾರ್ಯಪಡೆ ಸದಸ್ಯರು ವ್ಯವಸ್ಥಾಪನಾ ಕಾರ್ಯದಲ್ಲಿ ತೊಡಗಿ ಕಾರ್ಯಕ್ರಮವು ಪೂರ್ಣ ಯಶಸ್ಸುಗೊಳ್ಳಲು ಕಾರಣವಾಗಿದ್ದಾರೆ.

ಕಲಿಯುತ್ತಾ ಕಲಿಸುವ, ಕಲಿಯುತ್ತಾ ಬೆಳೆಸುವ, ಸಾಂಘಿಕ, ಪ್ರಯತ್ನವು ಶಾಲಾ ಮಕ್ಕಳಲ್ಲಿ ರೂಢಿಯಾಗಿದೆ. ದೈಹಿಕ ಶ್ರಮದ ಆಟೋಟ, ಕವಾಯತು, ವ್ಯಾಯಾಮಗಳಲ್ಲಿ ಕಾರ್ಯಪಡೆ ಸದಸ್ಯರು ಆಸಕ್ತಿಯಿಂದ ಭಾಗವಹಿಸುತ್ತಿದ್ದು, ಸ್ಪರ್ಧಾಮನೋಭಾವ ಜಾಗೃತವಾಗಿರುವುದಕ್ಕೆ ಸಾಕ್ಷಿಯಾಗಿದೆ.

ವಿದ್ಯಾರ್ಥಿ ಕಾರ್ಯಪಡೆಗೆ ಪ್ರತ್ಯೇಕ ಸಮವಸ್ತ್ರದ ನಿರ್ಬಂಧವಿಲ್ಲ, ಸರ್ಕಾರದಿಂದ ಶಾಲೆಯಲ್ಲಿ ನೀಡಲಾದ ಸಮವಸ್ತ್ರವೇ ಕಾರ್ಯಪಡೆಗೂ ಅನ್ವಯ ಮಾಡಲಾಗಿದೆ. ಇದರಿಂದ ಮಕ್ಕಳ ಪೋಷಕರಿಗೆ ಖರ್ಚಿನ ಹೊರೆಯಾಗುವುದಿಲ್ಲ.

‘ಕಲಿಯುತ್ತಾ ಕಲಿಸು’ ತತ್ವದ ಅನುಪಾಲನೆಯಿಂದ ಶಾಲೆಯ ಎಲ್ಲಾ ಮಕ್ಕಳೂ ಕಲಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯ.ಮಕ್ಕಳಲ್ಲಿ ಸ್ವಯಂ ಶಿಸ್ತು, ಸ್ವಯಂ ಪ್ರೇರಣೆಯನ್ನು ಜಾಗೃತಗೊಳಿಸಿ ಆದರ್ಶ ವಿದ್ಯಾರ್ಥಿಗಳಾಗಲು ಕಾರ್ಯಪಡೆ ಸದವಕಾಶ ಒದಗಿಸಿದೆ.


No comments: