Radio Phone in Programmes for Examination Preparation
A Success Story of All India Radio, Chitradurga
Article in Prajavani Shikshana 20 Dec 2010
| |
ಪರೀಕ್ಷಾ ಸಿದ್ಧತೆ | |
ರೇಡಿಯೋ ಫೋನ್ ಇನ್ ಶಿಕ್ಷಣ | |
ಮೈತ್ರೇಯಿ | |
ಮಾಹಿತಿ-ಶಿಕ್ಷಣ-ಮನೋರಂಜನೆಯ ಉದ್ದೇಶದೊಂದಿಗೆ ಭಾರತದ ಜನಮನದಲ್ಲಿ ಬೇರೂರಿರುವ ಆಕಾಶವಾಣಿ ಕಾಯಕ್ರಮಗಳ ಯಶಸ್ಸು ಈಗ ಸ್ಥಳೀಯ ರೇಡಿಯೋ ಕೇಂದ್ರಗಳ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಹಾಡುತ್ತಿವೆ. | |
ಹಲೋ ಸರ್! ಈ ಶಾರ್ಟ್‌ನೋಟ್ಸ್ ಪ್ರಶ್ನೆಗೆ ಎಷ್ಟು ಸಾಲು ಉತ್ತರ ಬರೀಬೇಕು? ಹಲೋ! ಬಹು ಆಯ್ಕೆ ಪ್ರಶ್ನೆಗಳಿಗೆ (ಮಲ್ಟಿಪಲ್ ಚಾಯ್ಸಿ) ಉತ್ತರಿಸಲು ಟೈಮ್ ಸಾಲುವುದಿಲ್ಲವಲ್ಲ, ಅದಕ್ಕೆ ಹೇಗೆ ಉತ್ತರಿಸಿದರೆ ಸಮಯ ಹೊಂದಿಸಿಕೊಳ್ಳಬಹುದು? ಮ್ಯಾಮ್! ಈ ಬಾರಿ ಪ್ರಶ್ನೆ ಪತ್ರಿಕೆ ಬದಲಾಗಿದೆ ಅಂತಾರಲ್ಲ, ಟಫ್ ಇರುತ್ತಾ? ಸರ್, ಮತ್ತೆ ಈ ಬಾರಿ ಬ್ಲ್ಯೂ ಪ್ರಿಂಟ್ ಕೊಟ್ಟಿದ್ದಾರಲ್ಲಾ, ಅದೇ ರೀತಿ ಪ್ರಶ್ನೆ ಪತ್ರಿಕೆ ಇರುತ್ತಾ ಅಥವಾ ಬೇರೆ ರೀತಿ ಇರುತ್ತಾ? ಹಲೋ! ವಿಜ್ಞಾನದ ಪ್ರಶ್ನೆಗಳಿಗೆ ಚಿತ್ರ ಬರೆಯುವುದು ಕಂಪಲ್ಸರೀನಾ? ಚಿತ್ರಕ್ಕೆ ಲೇಬಲಿಂಗ್ ಮಾಡಲೇಬೇಕಾ? ಸರ್! ಮ್ಯಾಪ್ ನಾವೇ ಬರೀಬೇಕಾ ಅಥವಾ ಪ್ರಶ್ನೆ ಪತ್ರಿಕೆಯಲ್ಲಿಯೇ ಪ್ರಿಂಟ್ ಆಗಿರುತ್ತಾ? ಹಲೋ ಮ್ಯಾಮ್! ಹಿಂದಿಯಲ್ಲಿ ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳು ಎಷ್ಟು ಅಂಕಗಳಿಗೆ ಬರುತ್ತವೆ? ಹೀಗೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಬರುತ್ತಲೇ ಇರುತ್ತವೆ. 1999ರಿಂದ ಪ್ರತಿ ವರ್ಷ ಡಿಸೆಂಬರ್ ಮೊದಲ ವಾರದಿಂದ ಮಾರ್ಚ್ ಕೊನೆಯ ವಾರದವರೆಗೆ ಸತತವಾಗಿ ನಡೆಯುತ್ತಿರುವ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳ ಪೂರ್ವಸಿದ್ಧತಾ ಸರಣಿ ಫೋನ್ ಇನ್ ಕಾರ್ಯಕ್ರಮಗಳ ಪರಿಣಾಮ ಎಷ್ಟಿತ್ತೆಂದರೆ, ಫಲಿತಾಂಶಗಳ ವಿಚಾರದಲ್ಲಿ ರಾಜ್ಯದಲ್ಲಿಯೇ ಕೊನೆಯ ಸ್ಥಾನಗಳಲ್ಲಿದ್ದ ಚಿತ್ರದುರ್ಗ ಜಿಲ್ಲೆ ನಿಧಾನಕ್ಕೆ ನಾಲ್ಕನೇ ಸ್ಥಾನ, ನಂತರ ಎರಡನೇ ಸ್ಥಾನ ಪಡೆಯುವಷ್ಟು! ‘ಹಿಂದಿನ ವರ್ಷಗಳಲ್ಲಿ ಹದಿನೈದು, ಹದಿನೆಂಟು, ಇಪ್ಪತ್ತನೇ ಸ್ಥಾನಗಳಲ್ಲಿದ್ದ ಚಿತ್ರದುರ್ಗ ಜಿಲ್ಲೆ ಎರಡನೇ ಸ್ಥಾನಕ್ಕೆ ಏರಿದ್ದರ ಹಿಂದೆ ಈ ಫೋನ್ ಇನ್ ನೇರ ಪ್ರಸಾರ ಕಾರ್ಯಕ್ರಮಗಳದ್ದೂ ಕಾಣಿಕೆ ಇದೆ. ವಿದ್ಯಾರ್ಥಿಗಳೂ, ಶಿಕ್ಷಕರೂ ಈ ಬಾನುಲಿ ಮಾಧ್ಯಮವನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬೇಕು’ ಎನ್ನುತ್ತಾರೆ ಚಿತ್ರದುರ್ಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ. ಶಂಕರಪ್ಪ. ‘ಪ್ರತಿ ಭಾನುವಾರ ಬೆಳಿಗ್ಗೆ 8.45ಕ್ಕೆ ನಮ್ಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಮಕ್ಕಳು ಬಂದು ಸೇರುತ್ತಾರೆ. ಶಾಲೆಯ ಮೈಕ್ ಸೆಟ್ ಜೋಡಿಸಿ, ರೇಡಿಯೋ ಹಾಕಿ ಅದರ ಮುಂದಿಟ್ಟು ಕಾರ್ಯಕ್ರಮ ಆಲಿಸಲು ಸಿದ್ಧರಾಗ್ತಾರೆ. 9.00ಕ್ಕೆ ಸಮುದಾಯದತ್ತ ಶಿಕ್ಷಣ - ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ಧತೆ ಪ್ರಾಯೋಜಿತ ನೇರ ಫೋನ್ ಇನ್ ಕಾರ್ಯಕ್ರಮ ಶುರು ಆಗುತ್ತೆ. ಆಫೀಸ್ ರೂಮಿನಿಂದ ಟೆಲಿಫೋನ್ ಮಾಡಿ ಪ್ರಶ್ನೆ ಕೇಳಲು, ತಜ್ಞರೊಂದಿಗೆ ನೇರವಾಗಿ ಸಂಭಾಷಣೆ ಮಾಡಲು ಅವಕಾಶ ಕೊಡ್ತೀವಿ. ವಿದ್ಯಾರ್ಥಿಗಳೂ ತುಂಬಾ ಉತ್ಸಾಹದಿಂದ ಅರ್ಧ ಅಥವಾ ಮುಕ್ಕಾಲು ಗಂಟೆಯ ಕಾರ್ಯಕ್ರಮ ಕೇಳ್ತಾರೆ.ಕಾರ್ಯಕ್ರಮ ಮುಗಿದ ಮೇಲೆಯೂ ಆ ವಿಷಯದ ಚರ್ಚೆ ಹತ್ತುಗಂಟೆಯವರೆಗೂ ಶಾಲೆಯಲ್ಲಿ ಮುಂದುವರಿಯುತ್ತೆ’ ಎನ್ನುತ್ತಾರೆ ಹಿರಿಯೂರು ತಾಲ್ಲೂಕು ಬುರುಜಿನ ರೊಪ್ಪ ಗ್ರಾಮದ ಶಾರದಾದೇವಿ ಗ್ರಾಮಾಂತರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಎ.ಎನ್. ಚಂದ್ರಪ್ಪ. ಪರೀಕ್ಷಾ ಸಿದ್ಧತೆ ಕಾರ್ಯಕ್ರಮಗಳಲ್ಲಿ ಕೇವಲ ವಿಷಯ ತಜ್ಞರಷ್ಟೇ ಭಾಗವಹಿಸುತ್ತಿಲ್ಲ. ಮನೋವೈದ್ಯರು, ಮನಃಶಾಸ್ತ್ರಜ್ಞರು, ಅಂತರರಾಷ್ಟ್ರೀಯ ವ್ಯಕ್ತಿತ್ವ ವಿಕಾಸ ತರಬೇತುದಾರರು ಭಾಗವಹಿಸಿ ಮಕ್ಕಳಲ್ಲಿರುವ ಪರೀಕ್ಷಾ ಭೀತಿ ನಿವಾರಿಸಿ, ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ. ಮಾಹಿತಿ-ಶಿಕ್ಷಣ-ಮನೋರಂಜನೆಯ ಉದ್ದೇಶದೊಂದಿಗೆ ಭಾರತದ ಜನಮನದಲ್ಲಿ ಬೇರೂರಿರುವ ಆಕಾಶವಾಣಿ ಕಾಯಕ್ರಮಗಳ ಯಶಸ್ಸು ಈಗ ಸ್ಥಳೀಯ ರೇಡಿಯೋ ಕೇಂದ್ರಗಳ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಹಾಡುತ್ತಿವೆ. ಶಿಕ್ಷಣ ಇಲಾಖೆಯ ಹಲವಾರು ಆಡಳಿತಾತ್ಮಕ ಸಮಸ್ಯೆಗಳನ್ನು ಫೋನ್ ಮೂಲಕವೇ ನೇರವಾಗಿ ಚರ್ಚಿಸಿ ಬಗೆಹರಿಸಲು ಸಾಧ್ಯವಾಗಿದೆ, ಶಿಕ್ಷಣವನ್ನು ಮನೆಯ ಬಾಗಿಲಿಗೇ ತಲುಪಿಸುವಲ್ಲಿ ಈ ಕಾರ್ಯಕ್ರಮಗಳು ನೆರವಾಗಿವೆ ಎನ್ನುತ್ತಾರೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳಾದ ಎನ್.ಎಂ. ರಮೇಶ್ ಮತ್ತು ಎಸ್.ಕೆ.ಬಿ. ಪ್ರಸಾದ್ ಅವರು. ಕರ್ನಾಟಕದ ಎಲ್ಲಾ ಆಕಾಶವಾಣಿಗಳಿಂದ ಸ್ಥಳೀಯ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಪ್ರಸಾರವಾದಲ್ಲಿ ಅಲ್ಲಿನ ಪ್ರತಿಭೆಗಳಿಗೆ ಮತ್ತು ಅಧಿಕಾರಿಗಳಿಗೆ ಒಳ್ಳೆಯ ಅವಕಾಶ ಸಿಕ್ಕಂತಾಗುತ್ತದೆ ಎಂಬುದು ಶಿಕ್ಷಣ ಇಲಾಖೆ, ಸರ್ವಶಿಕ್ಷಾ ಅಭಿಯಾನ ಯೋಜನೆ ಮತ್ತು ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಹಲವು ಹಿರಿಯ ಅಧಿಕಾರಿಗಳ ಅಭಿಪ್ರಾಯ. ಶಿಕ್ಷಣ ಇಲಾಖೆ, ಸರ್ವಶಿಕ್ಷಾ ಅಭಿಯಾನ ಯೋಜನೆ ಮತ್ತು ಆಕಾಶವಾಣಿ ಸಹಭಾಗಿತ್ವದಲ್ಲಿ ಈಗಾಗಲೇ ಜುಲೈನಿಂದ ಫೆಬ್ರವರಿವರೆಗೆ ಪ್ರತಿ ಮಧ್ಯಾಹ್ನ ಕೇಳಿ ಕಲಿ, ಚುಕ್ಕಿ ಚಿನ್ನ, ಚಿಣ್ಣರ ಚುಕ್ಕಿ ಕಾರ್ಯಕ್ರಮಗಳು ಮೂಡಿಬರುತ್ತಿದ್ದು, ಮಾರ್ಚ್‌ನಲ್ಲಿ ಬಾನ್‌ದನಿ ಸರಣಿಯಲ್ಲಿ ಪರೀಕ್ಷಾ ಸಿದ್ಧತೆಯ ಕಾರ್ಯಕ್ರಮಗಳು, ಏಪ್ರಿಲ್‌ನಿಂದ ಜೂನ್‌ವರೆಗೆ ಪೂರಕ ಶಿಕ್ಷಣ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳು ಬಿತ್ತರವಾಗುತ್ತಿವೆ. ಭವಿಷ್ಯದ ಕೋರ್ಸುಗಳ ಆಯ್ಕೆಯ ನಿರ್ಧಾರಕ್ಕೂ ಈ ಕಾರ್ಯಕ್ರಮಗಳು ಸಹಕಾರಿಯಾಗಿವೆ. ರೇಡಿಯೋಗಳ ಕಾಲ ಮುಗಿದೇ ಹೋಯಿತು ಎಂಬ ಮಾತುಗಳು ಕೇಳಿಬರುತ್ತಿದ್ದ ದಿನಗಳಲ್ಲಿ ಎಫ್.ಎಂ. ಎಂಬ ಹೊಸ ರೂಪತಾಳಿ ಸ್ಥಳೀಯ ಕೇಂದ್ರಗಳಾಗಿ ವಿಕೇಂದ್ರೀಕರಣಗೊಂಡ ಭಾರತೀಯ ಪ್ರಸಾರ ವ್ಯವಸ್ಥೆ ಸ್ಥಳೀಯ ಪ್ರತಿಭೆಗಳಿಂದ ಕಾರ್ಯಕ್ರಮಗಳನ್ನು ಮಾಡಿಸಿ ಯಶಸ್ವಿಯಾಗಿರುವುದಕ್ಕೆ ಕರ್ನಾಟಕದ ಮೊದಲ ಎಫ್.ಎಂ. ರೇಡಿಯೋ - ಚಿತ್ರದುರ್ಗದ ಆಕಾಶವಾಣಿ ಕೇಂದ್ರವೇ ಸಾಕ್ಷಿ. ಕೇವಲ ಆರು ಕಿಲೋವ್ಯಾಟ್ ಸಾಮರ್ಥ್ಯದಲ್ಲಿ, 102.6 ಮೆಗಾಹರ್ಟ್ಜ್ ತರಂಗಾಂತರಗಳಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 11.05 ರವರೆಗೆ ಸತತವಾಗಿ ಬಿತ್ತರಗೊಳ್ಳುವ ಚಿತ್ರದುರ್ಗ ಎಫ್.ಎಂ. ರೇಡಿಯೋ ಕಾರ್ಯಕ್ರಮಗಳು ಸುತ್ತಲಿನ 17 ತಾಲ್ಲೂಕುಗಳನ್ನು ಮುಟ್ಟುತ್ತಿದೆ. |
No comments:
Post a Comment