Monday, March 1, 2010

International Children's Day of Broadcasting 2010 - Article in Prajavani - Margadarshi Section - March 01, 2010


ಪ್ರಜಾವಾಣಿ » ಶಿಕ್ಷಣ ಪುರವಣಿ



ಮಕ್ಕಳ ಶೈಕ್ಷಣಿಕ ಅಗತ್ಯಗಳಿಗೆ ದನಿ

ಬಾನುಲಿ ಪ್ರಸಾರ ದಿನ

ಬೇದ್ರೆ ಮಂಜುನಾಥ



ಮಾರ್ಚ್ 7 - ಮಕ್ಕಳ ಅಂತರರಾಷ್ಟ್ರೀಯ ಬಾನುಲಿ ಪ್ರಸಾರ ದಿನ. ಮಕ್ಕಳಿಂದ - ಮಕ್ಕಳಿಗಾಗಿ - ಮಕ್ಕಳಿಗೋಸ್ಕರವಾಗಿ ಬಿತ್ತರವಾಗುವ ಈ ಕಾರ್ಯಕ್ರಮಗಳನ್ನು ಕೇಳುವುದಲ್ಲದೆ, ಶಿಕ್ಷಣ ಇಲಾಖೆ, ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಪಾಲ್ಗೊಂಡು ಮಕ್ಕಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ.


ಹಲೋ! ಇದು ಆಕಾಶವಾಣಿ. ಯಾರು ಮಾತಾಡ್ತಾ ಇರೋದು?
ಹಲೋ! ನಾನು ಸ್ಫೂರ್ತಿ.
ಎಷ್ಟನೇ ಕ್ಲಾಸ್ ಓದ್ತಾ ಇದ್ದೀಯ, ಸ್ಫೂರ್ತಿ? ಯಾವ ಸ್ಕೂಲು?
ಆರನೇ ಕ್ಲಾಸ್ ಓದ್ತಾ ಇದ್ದೀನಿ, ಕಾನ್ವೆಂಟ್ ಸ್ಕೂಲ್‌ನಲ್ಲಿ.
ಸ್ಫೂರ್ತಿ, ನಿನ್ನ ಹವ್ಯಾಸಗಳು ಏನು?
ಆಟ ಆಡೋದು, ಟಿ.ವಿ. ನೋಡೋದು, ಕಥೆ ಪುಸ್ತಕ ಓದೋದು, ಚಿತ್ರ ಬರಿಯೋದು, ಸ್ಟ್ಯಾಂಪ್ ಕಲೆಕ್ಟ್ ಮಾಡೋದು, ಸಂಗೀತಕ್ಕೆ ಹೋಗೋದು, ಹೀಗೆ ಎಲ್ಲ ಇಷ್ಟ ನಂಗೆ.
ಮುಂದೆ ಏನಾಗ್ಬೇಕು, ಏನು ಸಾಧಿಸ್ಬೇಕು ಅಂತ ಕನಸು ಇಟ್ಕೊಂಡಿದ್ದೀಯ, ಸ್ಫೂರ್ತಿ?
ಚೆನ್ನಾಗಿ ಓದಿ, ದೊಡ್ಡ ಆಫೀಸರ್ ಆಗ್ಬೇಕು ಅಂತಿದ್ದೀನಿ.
ಆಲ್ ದ ಬೆಸ್ಟ್, ಸ್ಫೂರ್ತಿ. ನಿನ್ನ ಕನಸು ನನಸಾಗಲಿ. ಇನ್ನು ನಮ್ಮ ಮುಂದಿನ ಕಾಲರ್ ಯಾರು ನೋಡೋಣ? ಹಲೋ! ಇದು ಆಕಾಶವಾಣಿ. ಯಾರು ಮಾತಾಡ್ತಾ ಇರೋದು?

ಪುಟಾಣಿಗಳಾದ ಸಮರ್ಥ, ತುಷಾರ್, ಅನುಪಮ ಮತ್ತು ಸುಪ್ರೀತ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಕುಳಿತು ಅರ್ಧಗಂಟೆ ಕಾಲ ಸುಮಾರು 40 ಜನ ಮಕ್ಕಳೊಂದಿಗೆ ಕಳೆದ ವರ್ಷ ಅಂತಾರಾಷ್ಟ್ರೀಯ ಮಕ್ಕಳ ಬಾನುಲಿ ಪ್ರಸಾರ ದಿನದ ಸಂದರ್ಭದಲ್ಲಿ ಮಕ್ಕಳೇ ನಡೆಸಿಕೊಟ್ಟ ನೇರ ಫೋನ್-ಇನ್ ಕಾರ್ಯಕ್ರಮದ ತುಣುಕು ಇದು.

ಮಕ್ಕಳಿಂದ-ಮಕ್ಕಳಿಗಾಗಿ- ಮಕ್ಕಳಿಗೋಸ್ಕರ, ಮಕ್ಕಳ ದನಿಯನ್ನು ಸಾರ್ವಜನಿಕರಿಗೆ ಕೇಳಿಸಲೋಸುಗ ವಿಶ್ವಸಂಸ್ಥೆಯ ಮಕ್ಕಳ ನಿಧಿ ಮತ್ತು ಇಂಟರ್‌ನ್ಯಾಷನಲ್ ಅಕಾಡೆಮಿ ಆಫ್ ಟೆಲಿವಿಷನ್ ಆರ್ಟ್ಸ್ ಅಂಡ್ ಸೈನ್ಸಸ್ ಸಹಯೋಗದಲ್ಲಿ ಪ್ರತಿವರ್ಷ ಡಿಸೆಂಬರ್ ಎರಡನೇ ಭಾನುವಾರದಂದು ಮಕ್ಕಳ ಅಂತಾರಾಷ್ಟ್ರೀಯ ಬಾನುಲಿ ಪ್ರಸಾರ ದಿನವನ್ನು ಆಚರಿಸಲಾಗುತ್ತಿತ್ತು. 2008 ರ ನವೆಂಬರ್‌ನಲ್ಲಿ ವಿಶ್ವಸಂಸ್ಥೆಯ ಮಕ್ಕಳ ನಿಧಿ ತೆಗೆದುಕೊಂಡ ತೀರ್ಮಾನದ ಅನ್ವಯ ಇನ್ನು ಮುಂದೆ ಪ್ರತಿ ವರ್ಷ ಮಾರ್ಚ್ ಮೊದಲನೇ ಭಾನುವಾರದಂದು ಈ ದಿನವನ್ನು ಆಚರಿಸಲಾಗುತ್ತದೆ. ಮುಂದಿನ ಬಾನುಲಿ ಪ್ರಸಾರ ದಿನ ಇದೇ ಮಾರ್ಚ್ 7, 2010 ರಂದು ಆಚರಿಸಲು ಸಿದ್ಧತೆ ನಡೆದು ಎಲ್ಲಾ ಹಕ್ಕುಗಳು ಎಲ್ಲಾ ಮಕ್ಕಳು (ಆಲ್ ರೈಟ್ಸ್ ಆಲ್ ಚಿಲ್ಡ್ರನ್) ಎಂಬ ಘೋಷವಾಕ್ಯವನ್ನು ನೀಡಲಾಗಿದೆ. ಕಳೆದ ವರ್ಷದ ಘೋಷವಾಕ್ಯ ’ಮಕ್ಕಳಿಗಾಗಿ ಒಂದಾಗಿ-ಪುಟಾಣಿಗಳ ದನಿ ಕೇಳಿ’ ಆಗಿತ್ತು. ವಿಶ್ವದ ಎಲ್ಲೆಡೆ ಮಕ್ಕಳ ದನಿ ಕೇಳಿಸಲು ಬಾನುಲಿ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.


ಪ್ರತಿ ಮಗುವಿಗೂ ತನ್ನ ಅಭಿಪ್ರಾಯ ಅನಿಸಿಕೆಗಳನ್ನು ವ್ಯಕ್ತಪಡಿಸುವ ಹಕ್ಕು ಇದೆ ಎಂಬ ಮಕ್ಕಳ ಹಕ್ಕುಗಳ 12ನೇ ವಿಧಿಯ ಅನ್ವಯ 1991 ರ ಡಿಸೆಂಬರ್ 08 ರಂದು (ಎರಡನೇ ಭಾನುವಾರ) ಆರಂಭಗೊಂಡ ಈ ಬಾನುಲಿ ಪ್ರಸಾರ ದಿನಾಚರಣೆ ಇದುವರೆಗೆ ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು ವಿಶ್ವದ 185ಕ್ಕೂ ಹೆಚ್ಚು ಸದಸ್ಯರಾಷ್ಟ್ರಗಳ 3000ಕ್ಕೂ ಹೆಚ್ಚು ಬಾನುಲಿ ಹಾಗೂ ಟಿ.ವಿ. ಪ್ರಸಾರ ಕೇಂದ್ರಗಳು ಈ ದಿನದಂದು ಮಕ್ಕಳ ಅಭಿಪ್ರಾಯಗಳನ್ನು ಬಿತ್ತರಿಸುತ್ತಿವೆ. (ಮಾಹಿತಿಗೆ ನೋಡಿ : www.unicef.org/videoaudio/)

ಭಾರತೀಯ ಪ್ರಸಾರ ಸಂಸ್ಥೆ - ಪ್ರಸಾರ ಭಾರತಿ - ತನ್ನ 250ಕ್ಕೂ ಹೆಚ್ಚು ಬಾನುಲಿ ಕೇಂದ್ರಗಳು ಮತ್ತು ದೇಶದಾದ್ಯಂತ ಹರಡಿರುವ ದೂರದರ್ಶನ ಜಾಲದ ಮೂಲಕ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದ್ದು ಪ್ರತಿವರ್ಷವೂ ಮಕ್ಕಳ ಅಂತಾರಾಷ್ಟ್ರೀಯ ಬಾನುಲಿ ಪ್ರಸಾರ ದಿನದಂದು ಮಕ್ಕಳಿಂದಲೇ ಹತ್ತಾರು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತಿದೆ. ಖಾಸಗಿ ವಾಹಿನಿಗಳೂ ಕೂಡ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ.



Welcome to the Wonderful World of Languges

No comments: