ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು 2011 ರಿಂದ ಬದಲಾಗಲಿವೆ. ಈ ಸಂಬಂಧವಾಗಿ ಆಡಳಿತ ಸುಧಾರಣಾ ಆಯೋಗ ಸೂಚಿಸಿದ್ದ ಬದಲಾವಣೆಗಳಿಗೆ ಸರ್ಕಾರದ ಅನುಮೋದನೆ ದೊರೆತಿದೆ. ಇನ್ನು ಮುಂದೆ ಪೂರ್ವಭಾವಿ ಪರೀಕ್ಷೆಯ ಒಂದು ಐಚ್ಛಿಕ ವಿಷಯ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆಗಳ ಬದಲಾಗಿ ‘ಸಿವಿಲ್ ಸರ್ವೀಸ್ ಆಪ್ಟಿಟ್ಯೂಡ್ ಟೆಸ್ಟ್’ (ಸಿ.ಎಸ್.ಎ.ಟಿ) ಹೆಸರಿನಲ್ಲಿ ನಾಗರಿಕ ಸೇವೆಗಳಲ್ಲಿ ಅಭ್ಯರ್ಥಿಗಳಿಗೆ ಇರುವ ಅಭಿರುಚಿ ಮತ್ತು ತೀರ್ಮಾನ ಕೈಗೊಳ್ಳುವಲ್ಲಿ ಇರುವ ನೈತಿಕ ಹಾಗೂ ಮಾನವೀಯ ಆಯಾಮ ಕುರಿತ 150 ಅಂಕಗಳ ಎರಡು ಪತ್ರಿಕೆಗಳು ಇರಲಿದ್ದು ಆಡಳಿತ ಸೂಕ್ಷ್ಮಗಳನ್ನು, ಆಡಳಿತಾತ್ಮಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಇದರಿಂದ ಸಹಾಯವಾಗಲಿದೆ. ಉಳಿದ ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಈಗ ಇರುವಂತೆಯೇ ಮುಂದುವರಿಯಲಿದ್ದು ಸುಧಾರಣಾ ಸಮಿತಿ ಈ ಕುರಿತಂತೆಯೂ ಅಧ್ಯಯನ ನಡೆಸಿದೆ. ಮುಂದೆ ಅಗತ್ಯ ಬದಲಾವಣೆಗಳನ್ನು ಸೂಚಿಸುವ ಸಾಧ್ಯತೆಗಳೂ ಇವೆ.
ಕೇಂದ್ರ ಲೋಕಸೇವಾ ಆಯೋಗದ ಚೇರಮನ್ ಪೊ.್ರ ಡಿ.ಪಿ. ಅಗರ್‌ವಾಲ್ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ವೈಸ್‌ಚೇರ್‌ಮನ್ ಪ್ರೊ. ಎಸ್. ಕೆ. ಖನ್ನಾ ಅವರ ನೇತೃತ್ವದ ಉನ್ನತ ಸಮಿತಿಯನ್ನು ರಚಿಸಿ ಹೊಸ ಮಾದರಿ ಪ್ರಶ್ನೆ ಪತ್ರಿಕೆಯ ರೂಪುರೇಷೆಗಳನ್ನು ಚರ್ಚಿಸಿ ಇದೇ ಏಪ್ರಿಲ್ ತಿಂಗಳ ಕೊನೆಯಲ್ಲಿ ಆಯೋಗಕ್ಕೆ ಸಲ್ಲಿಸಲು ಸೂಚಿಸಿದ್ದಾರೆ.
ಸಾರ್ವಜನಿಕ ಆಡಳಿತ, ಮನೋವಿಜ್ಞಾನ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳ, ತಂತ್ರಜ್ಞಾನ, ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ, ರಾಜಸ್ವ ಆದಾಯ ಮತ್ತು ವೆಚ್ಚಗಳ ನಿರ್ಣಾಯಕ ಪಾತ್ರ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಜೊತೆಗೆ ಅಂತರರಾಷ್ಟ್ರೀಯ ಸಂಪರ್ಕ, ರಾಜತಾಂತ್ರಿಕ ನಿಪುಣತೆ ಇತ್ಯಾದಿ ಎಲ್ಲ ವಿಷಯಗಳನ್ನು ಈ ಎರಡು ಪತ್ರಿಕೆಗಳಲ್ಲಿ ಅಡಕಗೊಳಿಸುವ ಸಾಧ್ಯತೆಗಳಿವೆ ಎಂದು ಸರ್ಕಾರದ ಉನ್ನತ ಸ್ತರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೂರ್ವಭಾವಿ ಪರೀಕ್ಷೆಗಳ ಬದಲಾದ ಸ್ವರೂಪ 2011ರಿಂದ ಜಾರಿಯಾಗುವ ಸಂಬಂಧವಾಗಿ ಕೇಂದ್ರ ಸರ್ಕಾರದ ಸಿಬ್ಬಂದಿ ಖಾತೆಯ ರಾಜ್ಯ ಸಚಿವರಾದ ಪೃಥ್ವಿರಾಜ್ ಚೌಹಾಣ್ ಅವರು ಮಾರ್ಚ್ 10ರಂದು ಲೋಕಸಭೆಯಲ್ಲಿ ಈ ವಿಷಯವನ್ನು ಬವಿರಂಗಪಡಿಸಿದ್ದು ಪ್ರಧಾನಿಗಳ ಒಪ್ಪಿಗೆಯೂ ದೊರೆತಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರಿ ಸೇವೆಗಳ ಪ್ರತಿಷ್ಠಿತ ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳ ನೇಮಕಾತಿಯಲ್ಲಿ ಸುಧಾರಣೆ ತರಲು ವಿವಿಧ ಸುಧಾರಣಾ ಸಮಿತಿಗಳು ಮಾಡಿದ್ದ ಶಿಫಾರಸ್ಸುಗಳ ಆಧಾರದ ಮೇಲೆ ಕೇಂದ್ರ ಲೋಕಸೇವಾ ಆಯೋಗ ಸಲ್ಲಿಸಿದ್ದ ವರದಿಯನ್ನು ಗಣನೆಗೆ ತೆಗೆದುಕೊಂಡ ಸರ್ಕಾರ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
ಬೌದ್ಧಿಕ ಮಟ್ಟ ಉನ್ನತವಾಗಿರುವ ಅಭ್ಯರ್ಥಿಗಳಿಗಿಂತ ನಾಗರಿಕ ಸೇವೆಗಳಲ್ಲಿ ತೊಡಗುವ ಅಭಿರುಚಿ ಇರುವ ಅಭ್ಯರ್ಥಿಗಳು ಉತ್ತಮ ಅಧಿಕಾರಿಗಳಾಗಬಲ್ಲರು. ಪ್ರತಿಷ್ಠಿತ ಐ.ಎ.ಎಸ್, ಐ.ಎಫ್.ಎಸ್., ಐ.ಪಿ.ಎಸ್., ಐ.ಆರ್.ಎಸ್. ಮುಂತಾದ ಹುದ್ದೆಗಳಿಗೆ ಆಯ್ಕೆಯಾಗುವ ದೃಢ ನಿರ್ಧಾರ ಹೊಂದಿರುವ ಅಭ್ಯರ್ಥಿಗಳು ಆಡಳಿತದಲ್ಲಿಯೂ ದೃಢನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು ಎಂಬುದು ಈ ಎಲ್ಲಾ ಸುಧಾರಣೆಗಳ ಹಿಂದಿರುವ ಸೂತ್ರ. ವಿವಿಧ ವಿಷಯಗಳಲ್ಲಿ ತಜ್ಞತೆ ಹೊಂದಿರುವುದರ ಜೊತೆ ಆಡಳಿತಾಧಿಕಾರಿಗೆ ಬೇಕಾದ ಅಗತ್ಯ ಕಾನೂನು ಪರಿಜ್ಞಾನ, ದೇಶದ ಸಮಸ್ಯೆಗಳ ಪರಿಚಯ ಹಾಗೂ ನಿರ್ವಹಣೆಯ ಕೌಶಲ ಅಪೇಕ್ಷಣೀಯ. ಪ್ರಸ್ತುತ ಪರೀಕ್ಷೆಯಲ್ಲಿ ಕಠಿಣತೆಯ ಮಟ್ಟ ಒಂದೊಂದು ವಿಷಯಕ್ಕೆ ಒಂದೊಂದರಂತೆ ನಿಗದಿಯಾಗಿದ್ದು ಕೆಲವು ನಿರ್ದಿಷ್ಟ ವಿಷಯಗಳನ್ನು ಆಯ್ದುಕೊಂಡಿದ್ದ ಅಭ್ಯರ್ಥಿಗಳು ಅತಿ ಹೆಚ್ಚು ಅಂಕ ಗಳಿಸಿ, ಕೆಲವು ಅಭ್ಯರ್ಥಿಗಳು ಬೇರೆ ವಿಷಯಗಳಲ್ಲಿ ಅತಿ ಕಡಿಮೆ ಅಂಕ ಗಳಿಸಿರುವುದು, ಟ್ಯೂಷನ್ ದಂಧೆಯ ಅಟಾಟೋಪ, ಆಮಿಷಗಳಿಗೆ ಬಲಿಯಾಗುವುದು ಮುಂತಾದವುಗಳನ್ನು ತಪ್ಪಿಸಿ, ಎಲ್ಲರಿಗೂ ಸಮ್ಮತವಾಗುವಂತಹ ಹಾಗೂ ಒಂದೇ ಮಟ್ಟದ ಕಠಿಣತೆ ಹೊಂದಿರುವ ಪತ್ರಿಕೆಗಳನ್ನು ಕೊಡುವುದರಿಂದ ಎಲ್ಲರಿಗೂ ಅವಕಾಶ ಸಿಕ್ಕಂತಾಗುತ್ತದೆ.
ಕೇಂದ್ರ ಲೋಕಸೇವಾ ಆಯೋಗ ಹಾಗೂ ದೇಶದ ವಿವಿಧ ಸಿಬ್ಬಂದಿ ನೇಮಕಾತಿ ಆಯೋಗಗಳು ನಡೆಸುವ ಆಯ್ಕೆ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು, ಮಾದರಿ ಉತ್ತರಗಳು, ನೋಟ್ಸ್, ಪ್ರೊಫೈಲ್ಸ್, ಮಾರ್ಗದರ್ಶನ ಸೇವೆ, ಮಾದರಿ ಸಂದರ್ಶನಗಳು, ಯಶಸ್ವೀ ಅಭ್ಯರ್ಥಿಗಳ ಜೊತೆ ಸಂವಾದ, ಸಂದರ್ಶನ ಇತ್ಯಾದಿ ಸಮಗ್ರ ಉಚಿತ ಮಾಹಿತಿಗಾಗಿ ನೋಡಿ, http://upscportal.com/
2011ರ ಐ.ಎ.ಎಸ್. ಪೂರ್ವಭಾವಿ ಪರೀಕ್ಷೆ ಪ್ರಶ್ನೆಪತ್ರಿಕೆಯ ಮಾದರಿ ಬದಲಾಗುತ್ತಿದೆ. ಮುಂದಿನ ವರ್ಷದ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳೇ, ಈಗಲೇ ಸಿದ್ಧರಾಗಿ.ಹಳೇ ಪದ್ಧತಿಯಲ್ಲಿ ಬರೆಯುತ್ತಿರುವ ಕೊನೆಯ ತಂಡದ ಅಭ್ಯರ್ಥಿಗಳೇ ನಿಮಗೂ ಗುಡ್‌ಲಕ್! |
No comments:
Post a Comment